ಸೋಮವಾರದಂದು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಅವರ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆದಿತ್ತು. ಒಟ್ಟು 14 ಸ್ಥಳಗಳ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಕಾಗದ ಪತ್ರಗಳ ಪರಿಶೀಲನೆ ನಡೆಸಿದ್ದರು.
ಈ ದಾಳಿ ದ್ವೇಷ ರಾಜಕಾರಣದಿಂದ ಕೂಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ದಾಳಿಗೆ ಈಗಾಗಲೇ ಖಂಡನೆ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ವಕ್ತಾರರಾಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಸಿಬಿಐ ದಾಳಿಯನ್ನು ಖಂಡಿಸಿದ್ದಾರೆ.
ಸಿಬಿಐ ದಾಳಿ ಪೂರ್ವ ನಿಯೋಜಿತ ಎಂದು ಹೇಳಿರುವ ಲಕ್ಷ್ಮಿ ಹೆಬ್ಬಾಳ್ಕರ್, ಕಳೆದ ಒಂದು ವರ್ಷದಿಂದ ಸುಮ್ಮನೆ ಇದ್ದ ಅಧಿಕಾರಿಗಳು ಉಪ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ದಾಳಿ ನಡೆಸಿರುವುದರ ಹಿಂದಿನ ಮರ್ಮವೇನು ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಹೇಳಿರುವ ಲಕ್ಷ್ಮಿ ಹೆಬ್ಬಾಳ್ಕರ್ ಇದರಿಂದ ಕಾಂಗ್ರೆಸ್ ನಾಯಕರ ಸ್ಥೈರ್ಯ ಕುಂದಿಸಲು ಸಾಧ್ಯವಿಲ್ಲ ಎಂದಿದ್ದಾರೆ.