ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ನಿವಾಸಗಳ ಮೇಲೆ ನಿನ್ನೆ ನಡೆದಿದ್ದ ಸಿಬಿಐ ದಾಳಿ ವೇಳೆ ಸೀಜ್ ಮಾಡಲಾಗಿದ್ದ ಹಣದ ಬಗ್ಗೆ ಇದೀಗ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಸಿಬಿಐ ಬಿಡುಗಡೆ ಮಾಡಿದ್ದ ಮಾಹಿತಿ ಪ್ರಕಾರ 58 ಲಕ್ಷ ವಶಕ್ಕೆ ಪಡೆಯಲಾಗಿದೆ. ಆದರೆ ಡಿಕೆಶಿ ಪರ ವಕೀಲರು ಯಾವುದೇ ಹಣ ಸೀಜ್ ಆಗಿಲ್ಲ ಎಂದಿದ್ದಾರೆ. ಇದೀಗ ಸಂಸದ ಡಿ.ಕೆ. ಸುರೇಶ್ ಕೇವಲ 6.78 ಲಕ್ಷ ಹಣ ಮಾತ್ರ ಸಿಕ್ಕಿದೆ ಎಂದಿದ್ದಾರೆ. ಮೂವರ ಹೇಳಿಕೆಗಳು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಿ.ಕೆ. ಸುರೇಶ್, ಸಿಬಿಐ ಅಧಿಕಾರಿಗಳ ದಾಖಲೆ ಪರಿಶೀಲನೆಯಲ್ಲಿ ನನ್ನ ಮತ್ತು ನನ್ನ ಅಣ್ಣನ ಮನೆಯಿಂದ ಸೇರಿ ಒಟ್ಟು 6.78 ಲಕ್ಷ ರೂಪಾಯಿಗಳು ಮಾತ್ರ ಸಿಕ್ಕಿದೆ. ಆದರೆ ಸಿಬಿಐ ಅಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಒಟ್ಟು 57 ಲಕ್ಷ ಸಿಕ್ಕಿದೆ ಎಂದಿದ್ದಾರೆ. ಬಾಕಿ 50.22 ಲಕ್ಷ ಹಣ ಎಲ್ಲಿಂದ ಬಂತು ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನನ್ನ ದೆಹಲಿ ನಿವಾಸದಲ್ಲಿ 1.57 ಲಕ್ಷ, ಬೆಂಗಳೂರಿನ ನನ್ನ ಅಣ್ಣನ ನಿವಾಸದಲ್ಲಿ 1.71 ಲಕ್ಷ, ಅವರ ಬೆಂಗಳೂರಿನ ಕಛೇರಿಯಲ್ಲಿ 3.5 ಲಕ್ಷ ರೂಪಾಯಿಗಳು ಅಧಿಕಾರಿಗಳಿಗೆ ಸಿಕ್ಕಿರುವುದಾಗಿ ಹೇಳಿದ್ದಾರೆ. ಅಧಿಕಾರಿಗಳ ದಾಖಲೆ ಪರಿಶೀಲನೆಯಲ್ಲಿ ನನ್ನ ಮತ್ತು ನನ್ನ ಅಣ್ಣನ ಮನೆಯಿಂದ ಸೇರಿ ಒಟ್ಟು 6.78 ಲಕ್ಷ ರೂಪಾಯಿಗಳು ಮಾತ್ರ ಸಿಕ್ಕಿವೆ. ಇನ್ನು ನನ್ನ ಅಣ್ಣನ ದೆಹಲಿ ಮನೆ ಮತ್ತು ನನ್ನ ಬೆಂಗಳೂರಿನ ಮನೆಯಲ್ಲಿ ಯಾವುದೇ ಹಣ ಸಿಕ್ಕಿಲ್ಲ. ಅಲ್ಲದೇ ನಮ್ಮ ಎರಡೂ ಮನೆಗಳಲ್ಲಿ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಆಭರಣಗಳನ್ನೂ ವಶಪಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಭರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಐಟಿ ಮತ್ತು ಇ.ಡಿ.ಗೆ ಕೊಟ್ಟ ದಾಖಲೆಗಳನ್ನೇ ಮತ್ತೊಮ್ಮೆ ಸಿಬಿಐ ಸ್ಪಷ್ಟನೆ ಪಡೆದು ಪರಿಶೀಲಿಸಿದೆ. ಹೀಗಿರುವಾಗ ಸಿಬಿಐ ಅಧಿಕಾರಿಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಒಟ್ಟು 57 ಲಕ್ಷ ಸಿಕ್ಕಿದೆ ಎಂದು ಹೇಳಿದ್ದೇಕೆ? ಹಾಗಾದರೆ ಬಾಕಿ 50.22 ಲಕ್ಷ ಹಣ ಎಲ್ಲಿ ಸಿಕ್ಕಿದೆ ಎಂಬುದನ್ನು ಸಿಬಿಐ ಅಧಿಕಾರಿಗಳೆ ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.