ಬೆಂಗಳೂರು; ಬಿಜೆಪಿ ಅಭ್ಯರ್ಥಿ ಮುನಿರತ್ನ ಆರ್.ಆರ್.ನಗರ ಕ್ಷೇತ್ರದ ಗೌರವ ಕಳೆಯುತ್ತಿದ್ದಾರೆ. ಅವರು ಟೆನ್ಷನ್ ನಲ್ಲಿ ಏನೇನೋ ಮಾತನಾಡುತ್ತಿದ್ದಾರೆ. ನ.3ರಂದು ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆಯಲ್ಲಿ ಗೆಲ್ಲುವ ಮೊದಲೇ ಸಿಎಂ ಯಡಿಯೂರಪ್ಪನವರು ಮುನಿರತ್ನಗೆ ಸಚಿವ ಸ್ಥಾನದ ಆಮಿಷವೊಡ್ಡಿದ್ದಾರೆ. ಕ್ಷೇತ್ರದಲ್ಲಿ ಮುನಿರತ್ನರನ್ನು ಏನು ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರೇ ಒಂದು ನಿರ್ಧಾರಕ್ಕೆ ಬರಲಿದ್ದಾರೆ. ಡಿ.ಕೆ.ಶಿವಕುಮಾರ್ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಯಾವಾಗ ಫೋನ್ ಕದ್ದಾಲಿಕೆ ಮಾಡಿದೆ? ಇವನು ಸರ್ಕಾರದಲ್ಲಿದ್ದಾನೆ ಹಾಗಾಗಿ ಎಲ್ಲಾ ಗೊತ್ತಾಗುತ್ತಿದೆ ಎಂದರು.
ನಾನು ಭ್ರಷ್ಟನಾಗಿದ್ದರೆ ಅಂದೇ ಕಾಂಗ್ರೆಸ್ ನನ್ನನ್ನು ಹೊರಹಾಕಬೇಕಿತ್ತು ಎಂದಿದ್ದಾರೆ. ಮುನಿರತ್ನ ಭ್ರಷ್ಟ ಎಂಬುದು ನಮಗೆ ಲೇಟ್ ಆಗಿ ಗೊತ್ತಾಯ್ತು. ಆತ ಸಿನಿಮಾದವನು ಎಂದುಕೊಂಡಿದ್ದೆವು. ಆದರೆ ಇವನು ಈ ರೀತಿ ಎಂದು ಆಮೇಲೆ ಗೊತ್ತಾಯ್ತು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶಿರಾ ಹಾಗೂ ಆರ್.ಆರ್.ನಗರ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ಹಣ ಹಂಚಿಕೆ ಮಾಡುತ್ತಿದ್ದಾರೆ. ನಾನು ಕೂಡ 20 ಕ್ಯಾಸೆಟ್ ಮಾಡಿಟ್ಟುಕೊಂಡಿದ್ದೇನೆ. ಎಲ್ಲಾ ಕ್ಯಾಸೆಟ್ ನ್ನು ಪೊಲೀಸರಿಗೆ ನೀಡುತ್ತೇನೆ. ನ.3ರಂದು ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.