ಅಕ್ರಮ ಹಣ ಸಂಪಾದನೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 10ಕೋಟಿ ದಂಡ ಕಟ್ಟಿ, 4 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಜಯಲಲಿತ ಆಪ್ತೆ ಶಶಿಕಲಾ ನಟರಾಜನ್ ಇನ್ನೇನು ಬಿಡುಗಡೆಯಾಗುತ್ತಿದ್ದಾರೆ. ನಾಲ್ಕು ವರ್ಷಗಳಲ್ಲಿ ಚಿನ್ನಮ್ಮ ಕನ್ನಡ ಕಲಿತಿದ್ದಾರೆ ಎನ್ನಲಾಗಿದೆ. ಚೆನ್ನಾಗಿ ಕನ್ನಡ ಮಾತನಾಡುವುದು, ಬರೆಯುವುದನ್ನೂ ಕಲಿತಿದ್ದಾರೆ ಶಶಿಕಲಾ. ಜೈಲಿಗೆ ಬಂದ ಮೊದ ಮೊದಲು ಶಶಿಕಲಾಗೆ ಭಾಷೆ ಸಮಸ್ಯೆ ಎದುರಾಗಿತ್ತು. ಆದರೆ ಇದೀಗ ಕನ್ನಡದಲ್ಲೇ ಎಲ್ಲರ ಜೊತೆ ಸಂವಾದ ಮಾಡುತ್ತಿದ್ದಾರಂತೆ.
ಶಶಿಕಲಾ ಕನ್ನಡ ಮಾತನಾಡುವುದು, ಬರೆಯುವುದಷ್ಟೆ ಅಲ್ಲ ಕೃಷಿ ಕೆಲಸದಲ್ಲೂ ಸೈ ಎನಿಸಿಕೊಂಡಿದ್ದಾರಂತೆ. ಅರ್ಧ ಎಕರೆ ಜಮೀನಿನಲ್ಲಿ ಬೇಸಾಯ ಮಾಡಿದ್ದು, ಒಂದು ಟನ್ ಪಪ್ಪಾಯ ಬೆಳೆದಿದ್ದಾರಂತೆ. ಅಷ್ಟೆ ಅಲ್ಲದೆ ತೊಗರಿ, ಬೀನ್ಸ್, ಬದನೆಕಾಯಿ, ನುಗ್ಗೆಕಾಯಿ ಬೆಳೆ ಕೂಡ ಬೆಳೆದಿದ್ದು ಮಿಶ್ರ ಬೇಸಾಯ ಮಾಡಿದ್ದಾರೆ ಎನ್ನಲಾಗಿದೆ.
ಇದರ ಜೊತೆಗೆ ಶಶಿಕಲಾ ಸೀರೆ ಡಿಸೈನ್ ಕೂಡ ಮಾಡುತ್ತಾರಂತೆ. ಥ್ರೆಡ್ ವರ್ಕ್‌ನಲ್ಲಿ ಬಳೆ, ಸರ ಡಿಸೈನ್ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೆ ಅಲ್ಲ ಚಿಕ್ಕ ಗುಲಾಬಿ ತೋಟ ಕೂಡ ಜೈಲಿನಲ್ಲಿ ನಿರ್ಮಿಸಿದ್ದಾರೆ. ಮಹಿಳಾ ಬ್ಯಾರಕ್ ಹೋಗುವ ದಾರಿಯಲ್ಲಿ ಕೆಂಪು ಗುಲಾಬಿ ಗಿಡಗಳನ್ನು ಬೆಳೆಸಿದ್ದು ನೋಡುಗರನ್ನು ಸೆಳೆಯುತ್ತಿವೆಯಂತೆ. ಒಟ್ನಲ್ಲಿ ಜೈಲಿನಲ್ಲಿ ಇದ್ದಷ್ಟು ದಿನಗಳನ್ನು ಕೆಲಸಗಳ ಮೂಲಕ ಕಳೆಯುತ್ತಿದ್ದಾರೆ ಶಶಿಕಲಾ.