ಬೆಂಗಳೂರು: ಜೆಡಿಎಸ್ ಬಿಜೆಪಿಯ ಬಿ ಟೀಂ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು, ವಿಲೀನ ವಿಚಾರ ತಳ್ಳಿ ಹಾಕುತ್ತಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಬಿಜೆಪಿ ಬಿ ಟೀಂ ಎಂಬುದನ್ನು ಪದೇ ಪದೇ ಸಾಬೀತು ಮಾಡುತ್ತಿದೆ. ಹೆಚ್.ಡಿ. ಕುಮಾರಸ್ವಾಮಿ ಹಾಕುವ ಸವಾಲುಗಳಿಗೆ ನಾನು ಉತ್ತರ ಕೊಡುತ್ತಾ ಇರಲು ಸಾಧ್ಯವಿಲ್ಲ. ನಾಳೆ ಹೋಗಿ ಬಾವಿಗೆ ಬೀಳಿ ಎಂದು ಹೇಳುತಾರೆ. ಹಾಗಂತಾ ನಾವು ಬಾವಿಗೆ ಬೀಳಲು ಆಗುತ್ತಾ? ಎಂದು ಪ್ರಶಿಸಿದರು.
ಇನ್ನು ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಲಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನ್ಯಾಕೆ ಹೊಸ ಪ್ರಾದೇಶಿಕ ಪಕ್ಷ ಕಟ್ಟಲಿ, ನಾನು ಕಾಂಗ್ರೆಸ್ ನವನು, ಇಲ್ಲೇ ಆರಾಮವಾಗಿದ್ದೇನೆ. ಬೇರೆ ಪಕ್ಷ ಕಟ್ಟುವ ಯಾವ ಉದ್ದೇಶವೂ ನನಗಿಲ್ಲ ಎಂದು ಹೇಳಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಸಿದ್ದರಾಮಯ್ಯ, ಖಾಸಗಿ ಶಾಲೆಗಳ ಜೊತೆ ರಾಜ್ಯ ಸರ್ಕಾರ ಶಾಮೀಲಾಗಿದೆ. ಖಾಸಗಿ ಶಾಲೆ ವಿಚಾರವಾಗಿ ನಾನು 3 ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ಯಾವುದಕ್ಕೂ ಉತ್ತರ ಕೊಟ್ಟಿಲ್ಲ. ರಾಜ್ಯ ಸರ್ಕಾರಕ್ಕೆ ಒಳ್ಳೆಯ ಕೆಲಸ ಮಾಡುವ ಯಾವುದೇ ಅಭ್ಯಾಸಗಳಿಲ್ಲ. ಕೇವಲ ಕೆಟ್ಟ ಕೆಲಸಗಳನ್ನು ಮಾಡುವುದೇ ಅದರ ಅಭ್ಯಾಸ. ಈಗ ಪೋಷಕರು ಖಾಸಗಿ ಶಾಲೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಹಿಂದೆಯೇ ನಾನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಲ್ಲರನ್ನೂ ಪಾಸ್ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೆ. ಆದರೆ ಈ ಬಗ್ಗೆ ಯಾವುದೇ ಗಮನ ಹರಿಸಿಲ್ಲ. ಈಗಲಾದರೂ ತಕ್ಷಣ ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.