ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಕಾಂಗ್ರೆಸ್ ಜೊತೆ ಜೆಡಿಎಸ್ ಕೈಜೋಡಿಸಿದ್ದು, ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ನಂತರ ನಡೆದ ಬೆಳವಣಿಗೆಯಲ್ಲಿ ಆಡಳಿತ ಪಕ್ಷದ ಕೆಲ ಸಚಿವರು ಹಾಗೂ ಶಾಸಕರ ರಾಜೀನಾಮೆಯಿಂದ ಕುಮಾರಸ್ವಾಮಿಯವರ ಸರ್ಕಾರ ಪತನಗೊಂಡಿತ್ತು.
ಬಳಿಕ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು, ನಂತರ ನಡೆದ ಉಪ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಇದರ ಮಧ್ಯೆ ಹೆಚ್.ಡಿ. ಕುಮಾರಸ್ವಾಮಿ, ಸರ್ಕಾರ ರಚನೆ ಕುರಿತಂತೆ ಹೊಸ ಬಾಂಬ್ ಸಿಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಶಿರಾ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆ ಸಂದರ್ಭದಲ್ಲಿ ತಮಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಕರೆ ಮಾಡಿ ಬಿಜೆಪಿ ಜೊತೆ ಬನ್ನಿ. ಐದು ವರ್ಷಗಳ ಕಾಲ ನೀವೇ ಮುಖ್ಯಮಂತ್ರಿಯಾಗಿರುತ್ತೀರಿ ಎಂದು ಆಹ್ವಾನಿಸಿದರೂ ಸಹ ನಾನು ಹೋಗಲಿಲ್ಲ ಎಂದು ಹೇಳಿದ್ದಾರೆ.