ಕೊರೊನಾ ವೈರಸ್ ದೇಶದಲ್ಲಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಮೊದ ಮೊದಲು ಭಯಪಡುತ್ತಿದ್ದ ಜನ ಈಗ ಅದಕ್ಕೆ ಹೊಂದಿಕೊಂಡು ಬದುಕುವುದಕ್ಕೆ ಶುರು ಮಾಡಿದ್ದಾರೆ. ಅದರಲ್ಲೂ ಈ ವರ್ಷ ಮದುವೆ, ಗೃಹ ಪ್ರವೇಶವೆಂದೆಲ್ಲಾ ಇಟ್ಟುಕೊಂಡುವರು ಒಮ್ಮೆ ಈ ಕೊರೊನಾದಿಂದ ಕಂಗೆಟ್ಟಿದ್ದರು.
ಮದುವೆಗೆ ಹೆಚ್ಚು ಜನ ಸೇರಬಾರದು ಎಂಬ ತಾಕೀತು ಹಾಕಿದಾಗ, ಕಲ್ಯಾಣ ಮಂಟಪ ಬುಕ್ ಮಾಡಿಯಾಗಿದೆ, ನೆಂಟರಿಷ್ಟರಿಗೆಲ್ಲ ಹೇಳಿಯಾಗಿದೆ ಎಂದು ತಲೆಕೆಡಿಸಿಕೊಂಡವರೇ ಹೆಚ್ಚು. ಆದರೆ ಈಗ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಸರಳವಾಗಿ ತಮ್ಮ ಹತ್ತಿರದ ಬಂಧು-ಬಳಗವನ್ನು ಸೇರಿಸಿಕೊಂಡು ಮದುವೆ ಕಾರ್ಯಕ್ರಮವನ್ನು ಮುಗಿಸುತ್ತಿದ್ದಾರೆ. ಹಣವಿದ್ದರೂ, ಇಲ್ಲದವರೂ ಕೂಡ ಎಲ್ಲರೂ ಈಗ ಈ ಸರಳ ಮದುವೆಗೆ ತಲೆಬಾಗಿದ್ದಾರೆ.
ಇದರಿಂದ ಮದುವೆಗಾಗಿ ಒಂದಷ್ಟು ಸಾಲ ಮಾಡುವುದು ತಪ್ಪುತ್ತಿದೆ. ಜತೆಗೆ ಆಡಂಬರದ ಮದುವೆಗಳಿಗೂ ಕೂಡ ಬ್ರೇಕ್ ಹಾಕಿದಂತೆ ಆಗುತ್ತಿದೆ. ಮದುವೆಗಾಗಿ ಖರ್ಚು ಮಾಡುವ ಒಂದಷ್ಟು ಹಣವನ್ನು ತಮ್ಮ ಮುಂದಿನ ಭವಿಷ್ಯಕ್ಕಾಗಿ ಉಳಿಸಿಕೊಳ್ಳಬಹುದು.