ಬೆಂಗಳೂರು: ಜಿಂದಾಲ್ ಗೆ ಭೂಮಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಜಿಂದಾಲ್ ಗೆ ನೀಡಿದ್ದ ಭೂಮಿ ವಾಪಸ್ ಪಡೆಯಲು ನಿರ್ಧರಿಸಲಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಜಿಂದಾಲ್ ಗೆ ಭೂಮಿ ನೀಡುವ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಲು ನಿರ್ಧರಿಸಲಾಗಿದೆ ಎಂದರು. ಜಿಂದಾಲ್ ಗೆ 3,667 ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಈ ಬಗ್ಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರಲ್ಲದೇ ಸಿಎಂ ಬಿ.ಎಸ್.ವೈ.ಗೆ ಲೀಗಲ್ ನೋಟೀಸ್ ಕೂಡ ಜಾರಿ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ.
ಇನ್ನು ಪಶುಸಂಗೋಪನೆ ಇಲಾಖೆಯಿಂದ ಪಿಪಿಪಿ ಮಾದರಿಯಲ್ಲಿ ಹಾವೇರಿಯಲ್ಲಿ ಅಲ್ಟ್ರಾ ಪ್ಯಾಕೇಜ್ ಮಿಲ್ಕ್ ಪ್ರೊಡಕ್ಟ್ ಯುನಿಟ್ ಸ್ಥಾಪನೆಗಾಗಿ 90 ಕೋಟಿ ಮೀಸಲಿಡಲು ನಿರ್ಧಾರ ಮಾಡಲಾಗಿದೆ. ಹಾಸನ ಮೆಡಿಕಲ್ ಕಾಲೇಜಿನಲ್ಲಿ 52 ಹೊಸ ಪಿಜಿ ಸೀಟ್ ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ, ಬಹುಗ್ರಾಮ ಕುಡಿಯುವ ನೀರು ಯೋಜನೆ ಜಲಜೀವನ್ ಮಷಿನ್ ಯೋಜನೆ ಅಡಿಯಲ್ಲಿ ಮಸ್ಕಿ, ಇಂಡಿ, ಚಡಚಣ, ಕೋಲಾರ, ಉಡುಪಿ, ಹುಬ್ಬಳ್ಳಿ-ಧಾರವಾಡಗಳಲ್ಲಿ ಜಾರಿಗೆ ನಿರ್ಧಾರ ಮಾಡಲಾಗಿದೆ ಎಂದರು.