ಮೈಸೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹಾಗೂ ಪ್ರತಾಪ್ ಸಿಂಹ ನಡುವಿನ ವಾಕ್ಸಮರ ಮುಂದುವರಿದಿದ್ದು, ಸುಮಲತಾ ಬಣ್ಣದ ಲೋಕದಿಂದ ಬಂದಿರುವವರು. ಹಾಗಾಗಿ ನಾಗರ ಹಾವು ಸಿನಿಮಾದ ಜಲೀಲನ ನೆನಪು ಮಾಡಿಕೊಂಡು ಡೈಲಾಗ್ ಹೊಡೆದಿರ್ತಾರೆ ಎಂದು ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಂಸದೆ ಸುಮಲತಾ, ಪ್ರತಾಪ್ ಸಿಂಹ ಒಬ್ಬ ಪೇಟೆ ರೌಡಿ. ಅವರ ಹೇಳಿಕೆಗೆ ನಾನು ಉತ್ತರಿಸುವ ಅಗತ್ಯವಿಲ್ಲ. ಅಂಬರೀಶ್ ಇದ್ದಿದ್ದರೆ ಯಾರಿಗೂ ಮಾತನಾಡುವ ಧೈರ್ಯವಿರುತ್ತಿರಲಿಲ್ಲ ಎಂದು ಹೇಳಿದ್ದರು.
ಇದೀಗ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಸುಮಲತಾ ಮೊದಲೇ ಬಣ್ಣದ ಜಗತ್ತಿನಿಂದ ಬಂದವರು. ಅವರು ಹಾಗೆ ಹೇಳಿದ್ದರೆ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ನಾಗರ ಹಾವು ಸಿನಿಮಾದ ಜಲೀಲನ ಪಾತ್ರ ನೆನೆಪಿಸಿಕೊಂಡು ಡೈಲಾಗ್ ಹೊಡೆದಿರ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಆಗಬಹುದು. ಚಮ್ಮಾರನ ಮಗ ಅಬ್ರಾಹಂ ಲಿಂಕನ್ ಅಮೆರಿಕ ಅಧ್ಯಕ್ಷರಾದರು, ಚಹಾ ಮಾರುತ್ತಿದ್ದ ಮೋದಿ ಪ್ರಧಾನಿಯಾಗಿದ್ದಾರೆ. ಹಾಗಾಗಿ ಯಾರು ಏನುಬೇಕಾದರೂ ಆಗಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಳೆಗಾರಿಕೆಗೆ, ನಮ್ಮ ಕುಟುಂಬದವರು ಎಂಬುದಕ್ಕೆಲ್ಲ ಅವಕಾಶ ಇಲ್ಲ ಎಂದು ಹೇಳಿದರು.