alex Certify ಜನರ ಸಾವು ನೋವಿಗೆ ಕೇಂದ್ರ – ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣ: ಸಿದ್ದರಾಮಯ್ಯ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನರ ಸಾವು ನೋವಿಗೆ ಕೇಂದ್ರ – ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣ: ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಕೊರೊನಾ ಎರಡನೇ ಅಲೆಯಲ್ಲಿ ಸಾವು – ನೋವು ಹೆಚ್ಚಾಗಲು ಸರ್ಕಾರಗಳೇ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು 14 ತಿಂಗಳಾದವು. ಕಳೆದ ಒಂದು ತಿಂಗಳಿಂದೀಚೆಗೆ 2ನೇ ಅಲೆ ಆರಂಭವಾಗಿದೆ. ಈಗ ಉಂಟಾಗುತ್ತಿರುವ ಸಾವು – ನೋವಿಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ. 2020ರ ನ.21ರಂದು ಸಂಸತ್ತಿನ ಸ್ಥಾಯಿ ಸಮಿತಿ ಕೇಂದ್ರ ಸರ್ಕಾರಕ್ಕೆ ಕೊರೊನಾ 2ನೇ ಅಲೆ ಬಗ್ಗೆ ಎಚ್ಚರಿಕೆ ನೀಡಿ ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿತ್ತು. ಆದರೆ ಈ ವರದಿಯನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದವು ಎಂದು ಕಿಡಿಕಾರಿದ್ದಾರೆ.

ಆಕ್ಸಿಜನ್, ಬೆಡ್, ಐಸಿಯು, ಔಷಧಗಳ ಸಿದ್ಧತೆ ಮಾಡಿಕೊಳ್ಳಬೇಕಾದ ಸರ್ಕಾರಗಳು ಅನಗತ್ಯ ಕಾಲಹರಣ ಮಾಡಿದವು. ಇದರ ಪರಿಣಾಮ ಇಂದು ಕೊರೊನಾ ಎರಡನೇ ಅಲೆ ಜೀವಗಳನ್ನು ಬಲಿಪಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಬಯಸುತ್ತೇನೆ ಎಂದಿರುವ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ಕೊರೊನಾ ಅಟ್ಟಹಾಸ; ಸರ್ಕಾರದ ತಪ್ಪು ಒಪ್ಪಿಕೊಂಡ ಸಂಸದ ಪ್ರತಾಪ್ ಸಿಂಹ

* ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಶೇ.50ರಷ್ಟು ಹೆಚ್ಚಿಸಬೇಕು, ಶಾಲೆ ಕಾಲೇಜು, ಹಾಸ್ಟೆಲ್, ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲೂ ತಾತ್ಕಾಲಿಕ ಬೆಡ್ ವ್ಯವಸ್ಥೆ ಮಾಡಿ

* ಸೋಂಕಿತರನ್ನು ನೋಡಿಕೊಳ್ಳಲು ಅಂತಿಮ ವರ್ಷದ ವೈದ್ಯಕೀಯ, ಅರೆ ವೈದ್ಯಕೀಯ ವಿದ್ಯಾರ್ಥಿಗಳನ್ನು, ದಾದಿಯರನ್ನು ನೇಮಿಸಿ

* ಸ್ವ ಇಚ್ಛೆಯಿಂದ ಮುಂದೆ ಬರುವ ರಾಜಕೀಯೇತರ ಸ್ವಯಂ ಸೇವಕರಿಗೆ ತರಬೇತಿ ನೀಡಿ ತಜ್ಞ ವೈದ್ಯರ ನೇತೃತ್ವದಲ್ಲಿ ತಂಡ ರಚಿಸಿ ಚಿಕಿತ್ಸೆ ನೀಡಲು ಆರಂಭಿಸಿ

* ರಾಜ್ಯದಲ್ಲಿ ಈಗಿರುವ ವೆಂಟಿಲೇಟರ್, ಆಕ್ಸಿಜನ್, ಬೆಡ್ ಗಳನ್ನು ಮುಂದಿನ 4-5 ದಿನಗಳ ಒಳಗಾಗಿ ಕನಿಷ್ಟ 30-40 ಪಟ್ಟು ಹೆಚ್ಚಿಸಬೇಕು

* ರೆಮ್ ಡಿಸಿವಿರ್ ಸೇರಿದಂತೆ ಜೀವರಕ್ಷಕ ಔಷಧಗಳನ್ನು ತಕ್ಷಣ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ

* ಬೆಂಗಳೂರಿಗೆ ಮಾತ್ರ ಪ್ರಸ್ತುತ ಗಮನಹರಿಸಲಾಗುತ್ತಿದೆ. ರಾಜ್ಯದ ಉಳಿದ ಜಿಲ್ಲೆ, ತಾಲೂಕುಗಳತ್ತಲೂ ಸರ್ಕಾರ ಗಮನಹರಿಸಬೇಕು. ಅಲ್ಲಿಯೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ

* ಹಾಸನ ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಂದ 40-50 ಸಾವಿರ ರೂ. ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸರ್ಕಾರ ಒಂದು ಮಾರ್ಗಸೂಚಿ ಹೊರಡಿಸಬೇಕು

* ಕೋವಿಡ್ ಲಸಿಕೆ ವಿಚಾರದಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಂಚಿಸಲಾಗುತ್ತಿದೆ. ದೇಶದಲ್ಲಿ 70 ವರ್ಷಗಳಿಂದ ಸಿಡುಬು, ದಡಾರ, ಪೋಲಿಯೋ ಮುಂತಾದ ಲಸಿಕೆಗಳನ್ನು ಉಚಿತವಾಗಿ ಸಾರ್ವಜನಿಕ ಆಂದೋಲನದ ಮೂಲಕ ನೀಡಲಾಗುತ್ತಿದೆ. ಆದರೆ ಕೊರೊನಾ ಲಸಿಕೆ ವಿಚಾರದಲ್ಲಿ ಪ್ರಧಾನಿ ಮೋದಿ ಸರ್ಕಾರ, ಜನರಿಂದ ಹಣ ಸಂಗ್ರಹಿಸುತ್ತಿದೆ. ಇಂತಹ ಹಣ ಸಂಗ್ರಹ ನಿಲ್ಲಬೇಕು. ರಾಜ್ಯ ಸರ್ಕಾರ ಕೇಂದ್ರದಿಂದ ಉಚಿತವಾಗಿ ಲಸಿಕೆ ಪಡೆದು ಜನರಿಗೆ ಸಿಗುವಂತಾಗಬೇಕು. ಅದಕ್ಕಾಗಿ ರಾಜ್ಯದ ಸಂಸದರು ಪ್ರಧಾನಿ ಮೋದಿಯವರನ್ನು ಒತ್ತಾಯಿಸಬೇಕು

ಕೇಂದ್ರ ಸರ್ಕಾರದ ನೀತಿಗಳಿಂದ ರಾಜ್ಯ ಬಸವಳಿಯುತ್ತಿದೆ. ಕೋವಿಡ್ ನಂತಹ ಇಂತಹ ಸಂದರ್ಭದಲ್ಲಿ ಲಸಿಕೆಗಳಿಗೂ ಹಣ ಪಡೆಯುತ್ತಿದ್ದರೂ ಸರ್ಕಾರ, ಮಂತ್ರಿಗಳು, ಸಂಸದರು ಬಾಯಿಮುಚ್ಚಿಕೊಂಡಿರುವುದನ್ನು ಸಹಿಸಲಾಗದು. ಕೊರೊನಾ ದುಃಸ್ಥಿತಿಯಲ್ಲಾದರೂ ಧ್ವನಿಯೆತ್ತಿ ಕೇಂದ್ರದ ಧೋರಣೆಯನ್ನು ಪ್ರಶ್ನಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...