ಬೆಂಗಳೂರು: ಕೊರೊನಾ ಭೀತಿ ಹಿನ್ನಲೆಯಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವ ಹಾಗೂ ಜಂಬೂ ಸವಾರಿ ಸಂಪೂರ್ಣ ಕಳೆಗುಂದಿದ್ದು, ಈ ಬಾರಿ ಜನರಿಲ್ಲದೆಯೇ ದಸರಾ ಆಚರಣೆ ನಡೆಯಲಿದೆ.
ಕೊರೊನಾ ಭೀತಿ ನಡುವೆ ದಸರಾ ಆಚರಣೆ ರೂಪುರೇಷೆ ಬಗ್ಗೆ ಇಂದು ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೇ ಸಂಪ್ರದಾಯದಂತೆ ಅರಮನೆಗೆ ಮಾತ್ರ ಸೀಮಿತವಾಗಿ ಆಚರಣೆ ನಡೆಸಲು ತೀರ್ಮಾನಿಸಲಾಗಿದೆ.
ನಾಡ ಹಬ್ಬವನ್ನು ಈ ಬಾರಿ ಕೊರೊನಾ ವಾರಿಯರ್ ಉದ್ಘಾಟಿಸಲಿದ್ದು, ಸಂಪ್ರದಾಯದಂತೆ ಅರಮನೆಯಲ್ಲಿ ಮಾತ್ರ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಯುವ ದಸರಾ, ಫಲಪುಷ್ಪ ಪ್ರದರ್ಶನ ನಡೆಸದಿರಲು ನಿರ್ಧರಿಸಲಾಗಿದೆ. ವಿಶೇಷವಾಗಿ ಈ ಬಾರಿ ಜಂಬೂ ಸವಾರಿ ಮೆರವಣಿಗೆ ನಡೆಯುವುದಿಲ್ಲ. ಬದಲಾಗಿ ಅರಮನೆಯೊಳಗೆ ಮಾತ್ರ ನಡೆಯಲಿದೆ.