ಮಂಗಳೂರು: ನಿರೂಪಕಿ ಅನುಶ್ರೀ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವರ್ಗಾವಣೆಯಾಗಿದ್ದಾರೆ ಎನ್ನಲಾಗಿದ್ದ ತನಿಖಾಧಿಕಾರಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದು, ಡ್ರಗ್ಸ್ ಪ್ರಕರಣದ ತನಿಖೆ ಮತ್ತೆ ಚುರುಕು ಪಡೆದುಕೊಂಡಿದೆ.
ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಅನುಶ್ರೀಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅನುಶ್ರೀ ವಿಚಾರಣೆಗೆ ಹಾಜರಾಗಿ ಬಂದ ಬಳಿಕ ಅನುಶ್ರೀ ರಕ್ಷಣೆಗೆ ಮಾಜಿ ಸಿಎಂ ಸೇರಿದಂತೆ ಹಲವು ರಾಜಕೀಯ ವ್ಯಕ್ತಿಗಳು ಮುಂದಾಗಿದ್ದಾರೆ. ತನಿಖೆಯ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೇ ಸಂದರ್ಭದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯಕ್ ಅವರ ವರ್ಗಾವಣೆ ಹಲವು ಅನುಮಾನಕ್ಕೆ ಕಾರಣವಾಗಿತ್ತು.
ಇದೀಗ ಮಾಧ್ಯಮಗಳ ವರದಿಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ತನಿಖಾಧಿಕಾರಿ ಶಿವಪ್ರಕಾಶ್ ನಾಯಕ್ ಅವರನ್ನು ಮತ್ತೆ ಅದೇ ಜಾಗದಲ್ಲಿ ಮುಂದುವರೆಸಿದ್ದು, ಇದೀಗ ಕರ್ತವ್ಯಕ್ಕೆ ಮರಳಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರ ಡ್ರಗ್ಸ್ ಪ್ರಕರಣ ಕುರಿತು ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಯಾವುದೇ ಒತ್ತಡಕ್ಕೆ ಮಣಿಯದಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಇದೀಗ ಸಿಬಿಐ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯಕ್ ಅನುಶ್ರೀ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅನುಶ್ರೀ ಅವರಿಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡುವ ಸಾಧ್ಯತೆಯಿದೆ. ಅಲ್ಲದೇ ಅನುಶ್ರೀ ರಕ್ಷಣೆಗೆ ಮುಂದಾಗಿದ್ದರು ಎನ್ನಲಾದ ಮಾಜಿ ಸಿಎಂ ಸೇರಿದಂತೆ ಕರಾವಳಿ ಭಾಗದ ಪ್ರಭಾವಿಗಳ ಹೆಸರು ಹೊರಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಪ್ರಭಾವಿಗಳ ಹೆಸರು ಹೊರಬಂದಲ್ಲಿ ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಲಿದೆ ಎಂದೇ ಹೇಳಲಾಗುತ್ತಿದೆ.