ಬೆಂಗಳೂರು: ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತದಾರರ ಓಲೈಕೆಗಾಗಿ ಅಭಿವೃದ್ಧಿ ಪ್ರಾಧಿಕಾರ, ನಿಗಮಗಳ ಸ್ಥಾಪಿಸುತ್ತಿರುವ ಕ್ರಮ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಜೆಡಿಎಸ್ ನಾಯಕ ವೈ.ಎಸ್.ವಿ.ದತ್ತಾ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಕಲ್ಯಾಣ ಉಪಚುನಾವಣೆಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ, ಮಸ್ಕಿ ಚುನಾವಣೆಗಾಗಿ ವೀರಶೈವ ಲಿಂಗಾಯತ ನಿಗಮ ಸ್ಥಾಪನೆ ಮಾಡಿದ್ದಾರೆ. ಬಸವಕಲ್ಯಾಣ ಭಾಗದಲ್ಲಿ ಮರಾಠ ಸಮುದಾಯ ಹೆಚ್ಚಿರುವುದರಿಂದ ಅವರ ಮತಗಳನ್ನು ಸೆಳೆಯುವ ಉದ್ದೇಶಕ್ಕಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದರು. ಈಗ ಮಸ್ಕಿ ಉಪಚುನಾವಣೆಗಾಗಿ ಅಲ್ಲಿರುವ ಲಿಂಗಾಯತ ಸಮುದಾಯದವರ ಓಲೈಕೆಗಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗಿದೆ. ಸರ್ಕಾರದ ನೀತಿ ಚುನಾವಣೆಯ ಗಿಮಿಕ್ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆಗಾಗಿ ಮುಖ್ಯಮಂತ್ರಿಗಳು, ಸಚಿವರು ಮಾಡುತ್ತಿರುವ ತಂತ್ರಗಳು ಜನರಿಗೆ ಗೊತ್ತಾಗುತ್ತಿದೆ. ಕೇವಲ ಚುನಾವಣಾ ಹಿತಕ್ಕಾಗಿ ಈ ರೀತಿಯ ಪ್ರಾಧಿಕಾರ, ನಿಗಮಗಳ ರಚನೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.