ಇನ್ನೇನು ಗ್ರಾಮಪಂಚಾಯ್ತಿ ಚುನಾವಣೆಗೆ ದಿನಾಂಕ ನಿಗದಿಯಾಗಬೇಕು. ಇಂದು ಈ ಚುನಾವಣೆಗೆ ದಿನಾಂಕ ನಿಗದಿ ಬಹುತೇಕ ಆಗಲಿದೆ. ಈ ಬೆನ್ನಲ್ಲೇ ಬಿಜೆಪಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದೆ.
ಈ ಬೆನ್ನಲ್ಲೇ ಚಿಕ್ಕಬಳ್ಳಾಪುರದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಕಾರ್ಯಕ್ರಮ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅಶ್ವಥ್ ನಾರಾಯಣ್, ಸಂಸದೆ ಶೋಭಾ ಕರಂದ್ಲಾಜೆ, ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಮುಂದಿನ ಆರ್ಥಿಕ ವರ್ಷದಲ್ಲಿ ಗ್ರಾಮಗಳ ಸಶಕ್ತೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತದೆ ಎಂದರು.
ಇನ್ನು ಮುಂದಿನ ವರ್ಷಗಳಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ 1.5 ಕೋಟಿ ಹಣ ನೀಡಲು ಚಿಂತಿಸಲಾಗಿದೆ. ಅದರಂತೆ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಗ್ರಾಮಪಂಚಾಯ್ತಿಗಳ ಅಭಿವೃದ್ಧಿಗೆ 31 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ. ಇನ್ಮುಂದೆ ನೀರಿಗಾಗಿ ಹಣ ಬೇಕು ಎಂದರೆ ಜಿಲ್ಲಾ ಪಂಚಾಯ್ತಿಗೆ ಹೋಗಬೇಕಿಲ್ಲ. ಅದರ ಬದಲು ನೇರವಾಗಿ ಗ್ರಾ.ಪಂ.ಗಳಿಗೆ ಹಣ ನೀಡಲಾಗುತ್ತದೆ. ಜೊತೆಗೆ ನರೇಗಾ ಹಣ ಕೂಡ ಗ್ರಾಮ ಪಂಚಾಯ್ತಿಯಿಂದಲೇ ನೇರವಾಗಿ ಫಲಾನುಭವಿಗಳಿಗೆ ನೀಡಲಾಗುತ್ತದೆ ಎಂದರು.