ಬೆಂಗಳೂರು: ಗೋವುಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಸುಗ್ರಿವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರಿವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಅನುಮೋದನೆ ದೊರೆತಿದೆ. ವರ್ಷದಿಂದ ವರ್ಷಕ್ಕೆ ಗೋವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪಕ್ಷಭೇದವನ್ನು ಮರೆತು ಗೋವುಗಳ ಸಂರಕ್ಷಣೆಗೆ ಮುಂದಾದರೆ ನಾಡಿನ ಪಶುಸಂಪತ್ತು ವೃದ್ಧಿಸುತ್ತದೆ. ಸುಗ್ರಿವಾಜ್ಞೆಗೆ ಸಂಪುಟದಿಂದ ಅನುಮೋದನೆ ಸಿಕ್ಕಿರುವುದು ಸಂತಸದ ವಿಚಾರ ಎಂದರು.
2019ರ ಜಾನುವಾರು ಗಣತಿ ಪ್ರಕಾರ 2,38,296 ಗೋವುಗಳನ್ನು ಪ್ರತಿವರ್ಷ ವಧೆ ಮಾಡಲಾಗುತ್ತಿದೆ. ಇದೇ ವೇಗದಲ್ಲಿ ಗೋವುಗಳ ವಧೆ ನಡೆಯುತ್ತ ಹೋದರೆ ಮುಂದಿನ ದಿನಗಳಲ್ಲಿ ಗೋವುಗಳನ್ನು ಪುಸ್ತಕಗಳಲ್ಲಿ ನೋಡುವ ಸಮಯ ದೂರವಿಲ್ಲ. ಅಕ್ರಮ ಗೋವುಗಳ ಸಾಗಣೆ ಮತ್ತು ವಧೆ ತಡೆಯುವುದು ನಮ್ಮ ತುರ್ತು ಆದ್ಯತೆಯಾಗಿದೆ ಎಂದು ಹೇಳಿದರು.
ಹಳೆ ಮಸೂದೆ ಮಂಡನೆಯಲ್ಲಿದ್ದ ಆಕ್ಷೇಪಣೆಗಳನ್ನು ಈಗಿನ ಮಸೂದೆಯಲ್ಲಿ ಸರಿಪಡಿಸಲಾಗಿದೆ. ಹಳೆಯ ಮಸೂದೆಯಲ್ಲಿ ಎಮ್ಮೆ, ಕೋಣಗಳ ಹತ್ಯೆಗೂ ನಿಷೇಧವಿತ್ತು ಆದರೆ 2020ರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕದಲ್ಲಿ 13 ವರ್ಷದ ಎಮ್ಮೆ, ಕೋಣಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಿದರು.