ಬೆಂಗಳೂರು: ಸಿಬಿಐ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ಎದ್ದಿರುವ ಗೊಂದಲಗಳಿಗೆ ತೆರೆ ಎಳೆದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿನ್ ನಾರಾಯಣ್ ಮನೆಯಲ್ಲಿ 50 ಲಕ್ಷ ಕ್ಯಾಶ್ ಸಿಕ್ಕಿದೆಯಂತೆ ಎಲ್ಲವನ್ನು ಸೇರಿಸಿ 57 ಲಕ್ಷ ಎಂದು ಅಧಿಕಾರಿಗಳು ಹೇಳಿರಬೇಕು ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸಿಬಿಐ ದಾಳಿ ವೇಳೆ ದೆಹಲಿ ಮನೆಯಲ್ಲಿ ಒಂದುವರೆ ಲಕ್ಷ ಹಣ ಸಿಕ್ಕಿದೆಯಂತೆ, ಬೆಂಗಳೂರಿನ ನನ್ನ ಮನೆಯಲ್ಲಿ 1 ಲಕ್ಷ 77 ಸಾವಿರ, ಕಛೇರಿಯಲ್ಲಿ 3.5 ಲಕ್ಷ ರೂಪಾಯಿ ಹಣ ಸಿಕ್ಕಿದೆಯಂತೆ. ಉಳಿದಂತೆ ದೊಡ್ಡಆಲನಹಳ್ಳಿ ನಿವಾಸ, ಕೋಡಿಹಳ್ಳಿಯ ನನ್ನ ತಾಯಿ ನಿವಾಸದಲ್ಲಿಯೂ ಏನೂ ಸಿಕ್ಕಿಲ್ಲ. ಮುಂಬೈನಲ್ಲಿ ನನ್ನ ಮಗಳ ಹೆಸರಲ್ಲಿ ಒಂದು ಫ್ಲಾಟ್ ಇದೆ. ಆದರೆ 6 ವರ್ಷಗಳಿಂದ ನಾನು ಅಲ್ಲಿಗೆ ಹೋಗಿಲ್ಲ. ಇನ್ನು ಕನಕಪುರದಲ್ಲಿಯೂ ನನ್ನ ಮನೆಯಿದೆ. ಆದರೆ ಅಲ್ಲಿ ಯಾವುದೇ ಅಧಿಕಾರಿಗಳು ಹೋಗಿಲ್ಲ ಎಂದರು.
ಇನ್ನು ಸಚಿನ್ ನಾರಾಯಣ್ ಮನೆಯಲ್ಲಿ 50 ಲಕ್ಷ ಹಣ ಸಿಕ್ಕಿದೆಯಂತೆ. ಅವರದ್ದು ಹಲವು ಉದ್ಯಮಗಳಿವೆ ಭಾನುವಾರ ಹಣ ಬಂದಿದ್ದರಿಂದ ಬ್ಯಾಂಕ್ ಗೆ ಹಾಕಲು ಆಗಿರಲಿಲ್ಲ ಎಂದಿದ್ದಾರೆ. ಎಲ್ಲವನ್ನು ಸೇರಿಸಿ ಸಿಬಿಐ ಅಧಿಕಾರಿಗಳು 57 ಲಕ್ಷ ಎಂದಿರಬೇಕು ಎಂದು ಹೇಳಿದರು.