ಗುತ್ತಿಗೆ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಈ ನೌಕರರುಗಳಿಗೆ ವಿಶೇಷ ಹೆಚ್ಚುವರಿ ಭತ್ಯೆ ನೀಡಲು ಆದೇಶ ಹೊರಡಿಸಲಾಗಿದೆ.
14252 ವಿವಿಧ ಹುದ್ದೆಗಳ ಉದ್ಯೋಗಿಗಳಿಗೆ ಈ ವಿಶೇಷ ಹೆಚ್ಚುವರಿ ಭತ್ಯೆ ಲಭ್ಯವಾಗಲಿದ್ದು, ಇದರನ್ವಯ ಆಯುಷ್ ಮತ್ತು ಎಂಬಿಬಿಎಸ್ ವೈದ್ಯರು ತಲಾ 10 ಸಾವಿರ ರೂಪಾಯಿ, ಶುಶ್ರೂಷಕಿಯರು, ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿಸ್ಟ್ ಮೊದಲಾದವರಿಗೆ 5000 ರೂ. ನಂತೆ ಮುಂದಿನ ಆರು ತಿಂಗಳ ಅವಧಿಗೆ ವಿಶೇಷ ಭತ್ಯೆ ಲಭ್ಯವಾಗಲಿದೆ.
ಈ ಉದ್ಯೋಗಿಗಳ ವೇತನ ಹೆಚ್ಚಳ ಮಾಡುವಂತೆ ಆರೋಗ್ಯ ಇಲಾಖೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ವೇತನ ಹೆಚ್ಚಳದ ಬದಲು ವಿಶೇಷ ಹೆಚ್ಚುವರಿ ಭತ್ಯೆಯನ್ನು ಘೋಷಿಸಿ ಆದೇಶ ಹೊರಡಿಸಿದೆ. ಕೋವಿಡ್ ಕಾರಣಕ್ಕೆ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಹೀಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.