ಆ ವಿದ್ಯಾರ್ಥಿನಿಯ ತಂದೆ ಗಾರೆ ಕೆಲಸಗಾರ. ಜೀವನ ನಿರ್ವಹಣೆಗಾಗಿ ಈ ವೃತ್ತಿ ಮಾಡುತ್ತಿದ್ದು, ಬಡತನದಲ್ಲೂ ಮಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದನ್ನು ಮರೆಯಲಿಲ್ಲ. ಇದೀಗ ಆ ವಿದ್ಯಾರ್ಥಿನಿ ‘ಚಿನ್ನ’ದ ಸಾಧನೆ ಮಾಡುವ ಮೂಲಕ ಕುಟುಂಬಸ್ಥರ ಕನಸನ್ನು ನನಸು ಮಾಡಿದ್ದಾರೆ.
ಹೌದು, ತುಮಕೂರು ಜಿಲ್ಲೆ ವಿ.ಜಿ. ಪಾಳ್ಯದ ಅರ್ಪಿತಾ ಬಿಪಿ.ಇಡಿ ಪದವಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದು, ದಾವಣಗೆರೆಯ ಶಿವಗಂಗೋತ್ರಿ ಆವರಣದಲ್ಲಿ ಬುಧವಾರ ನಡೆದ ದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಸ್ವೀಕರಿಸಿದ್ದಾರೆ.
ಅರ್ಪಿತಾ ಅವರ ತಂದೆ ಕುಮಾರ್ ಗಾರೆ ಕೆಲಸ ಮಾಡುವವರಾಗಿದ್ದರೆ, ತಾಯಿ ನರಸಮ್ಮ ಗೃಹಿಣಿ. ಅರ್ಪಿತಾ ಶೈಕ್ಷಣಿಕ ವಲಯದಲ್ಲಿ ಮಾತ್ರವಲ್ಲದೆ ಕ್ರೀಡಾ ಚಟುವಟಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಬ್ಬಡ್ಡಿ ಪಟುವಾಗಿರುವ ಅವರು ಬಡತನದ ಕಾರಣಕ್ಕೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.