ಬೆಂಗಳೂರು: ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತರ ಬದುಕನ್ನು ಶಾಶ್ವತವಾಗಿ ಘಾಸಿಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ, ಇದೀಗ ರಸಗೊಬ್ಬರದ ಬೆಲೆ ಏರಿಸಿ ಅವರ ಗಾಯದ ಮೇಲೆ ಬರೆ ಎಳೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ರೈತ ಶತ್ರು ಪ್ರಧಾನಿ ಮೋದಿ ಸರ್ಕಾರ ರಸಗೊಬ್ಬರದ ಬೆಲೆಗಳನ್ನು ಶೇ.60ರಷ್ಟು ಹೆಚ್ಚಿಸಿದೆ. ಡಿ.ಎ.ಪಿ. ಗೊಬ್ಬರ ಏಪ್ರಿಲ್ 1 ರಿಂದ ಒಂದು ಕ್ವಿಂಟಾಲಿಗೆ 1400 ಗಳಷ್ಟು ಬೆಲೆ ಜಾಸ್ತಿಯಾಗುತ್ತಿದೆ. ಇದುವರೆಗೆ 2,400 ರೂಪಾಯಿಗಳಿದ್ದ ಬೆಲೆ ಈಗ 3,800 ರೂ. ಗಳಾಗುತ್ತಿದೆ. ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಗಳ ಮೇಲಿನ ಬೆಲೆ ಕ್ವಿಂಟಾಲ್ ಗೆ ರೂ.1250 ಹೆಚ್ಚಿಸಿದ್ದಾರೆ. ರೂ.2350 ಗೆ ಸಿಗುತ್ತಿದ್ದ ಗೊಬ್ಬರ ಈಗ ರೂ.3600 ರಷ್ಟಾಗಿದ್ದು ರೈತರು ನಿಸ್ಸಂಶಯವಾಗಿ ದಿವಾಳಿಯಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪ ಫೆವಿಕಾಲ್ ಹಾಕಿ ಕುರ್ಚಿಯಲ್ಲಿ ಕುಳಿತಿದ್ದಾರೆ; ಮಾನ ಮರ್ಯಾದೆ ಇದ್ದರೆ ಅಧಿಕಾರದಿಂದ ಕೆಳಗಿಳಿಯಿರಿ: ಸಿದ್ದರಾಮಯ್ಯ ವಾಗ್ದಾಳಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಜಾಸ್ತಿಯಾಗಿದೆ, ಅದಕ್ಕೆ ಬೆಲೆ ಜಾಸ್ತಿ ಮಾಡಿದ್ದೇವೆ ಎಂಬ ಕೇಂದ್ರ ಸರ್ಕಾರದ ಸಬೂಬು ಶುದ್ಧ ಸುಳ್ಳು. ಕಳೆದ ವರ್ಷ ರೂ.1,33,947 ಕೋಟಿ ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲಾಗಿತ್ತು. ಈಗ ಅದು ರೂ.79,530 ಕೋಟಿಗೆ ಇಳಿಸಿದ್ದಾರೆ. ಆದ್ದರಿಂದಲೇ ಏಪ್ರಿಲ್ 1 ರಿಂದ ಬೆಲೆ ಹೆಚ್ಚಾಗಿದೆ. ಕೇಂದ್ರದ ರೈತ ವಿರೋಧಿ ನೀತಿಯನ್ನು ಪ್ರಶ್ನಿಸದ ರಾಜ್ಯ ಬಿಜೆಪಿ ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಸಂಸದರ ಗುಲಾಮಿ ಮನಸ್ಥಿತಿ ಕರ್ನಾಟಕವನ್ನು ಸರ್ವನಾಶ ಮಾಡಲಿದೆ ಎಂದು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.