ಬೆಂಗಳೂರು: ಇನ್ಮುಂದೆ ಬಸ್ ಹತ್ತಲು ಕೇವಲ ಟಿಕೆಟ್ ಇದ್ದರೆ ಮಾತ್ರ ಸಾಲಲ್ಲ. ಕಡ್ಡಾಯವಾಗಿ ಮಾಸ್ಕ್ ಕೂಡ ಧರಿಸಲೇಬೇಕು. ಒಂದು ವೇಳೆ ಮಾಸ್ಕ್ ಹಾಕದಿದ್ದರೆ ಭಾರೀ ಪ್ರಮಾಣದ ಬೆಲೆ ತೆರಲೇಬೇಕು.
ಕೊರೊನಾ ಭೀತಿಯಿಂದಾಗಿ ಸಾರ್ವಜನಿಕ ಜೀವನದಲ್ಲಿ ಮಾಸ್ಕ್ ಕಡ್ಡಾಯವಾಗಿಬಿಟ್ಟಿದೆ. ಇದೀಗ ಬಿಎಂಟಿಸಿ ಕೂಡ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಬಿಎಂಟಿಸಿ ಬಸ್ ನಲ್ಲಿ ಮಾಸ್ಕ್ ಹಾಕದೇ ಸಂಚರಿಸಿದರೆ 100 ರೂ. ದಂಡ ವಿಧಿಸಲಾಗುತ್ತಿದೆ. ಟಿಕೆಟ್ ತನಿಖಾಧಿಕಾರಿಗಳಿಂದ ಮಾಸ್ಕ್ ದಂಡ ವಸೂಲಿ ಮಾಡಲಾಗುತ್ತಿದೆ. ಈ ಮೂಲಕ ಬಸ್ ಪ್ರಯಾಣಿಕರಲ್ಲಿ ಅರಿವು ಮೂಡಿಸುತ್ತಿದೆ ಬಿಎಂಟಿಸಿ.
ಈಗಾಗಲೇ ಬೆಂಗಳೂರಿನಲ್ಲಿ ಮಾಸ್ಕ್ ಧರಿಸದೇ ಓಡಾಡಿದರೆ ಬಿಬಿಎಂಪಿ ಮಾರ್ಷಲ್ ಗಳು, ಪೊಲೀಸರು ಮಾತ್ರ ದಂಡ ವಸೂಲಿ ಮಾಡುತ್ತಿದ್ದರು. ಇದೀಗ ಬಸ್ ನಲ್ಲಿ ಮಾಸ್ಕ್ ಹಾಕದಿದ್ದರೂ ದಂಡ ಪಾವತಿಸಬೇಕಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ.