ಕೊರೊನಾ ಮಹಾಮಾರಿಯಿಂದಾಗಿ ಜನರ ಜೀವ ಹಾಗೂ ಜೀವನ ಬೀದಿಗೆ ಬಿದ್ದಿದೆ. ಈಗಾಗಲೇ ದೇಶದಲ್ಲಿ ಸಾವಿರಾರು ಮಂದಿ ಸೊಂಕಿತರು ಸಾವನ್ನಪ್ಪಿದ್ದಾರೆ. ಅಷ್ಟೆ ಅಲ್ಲ ಎಷ್ಟೊ ಉದ್ಯಮಗಳು ನೆಲ ಕಚ್ಚಿ ಹೋಗಿವೆ. ಇದೀಗ ಗಣೇಶ ಮೂರ್ತಿ ತಯಾರಕರಿಗೂ ಕೊರೊನಾ ಎಫೆಕ್ಟ್ ತಟ್ಟಿದೆ. ಕೊರೊನಾದಿಂದಾಗಿ ಮೂರ್ತಿ ಮಾರಾಟವಾಗದೇ ನಷ್ಟ ಅನುಭವಿಸುವಂತಾಗಿದೆ.
ಹೌದು, ಒಂದು ಕಡೆ ಸಾರ್ವಜನಿಕವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಹೀಗಾಗಿ ಗಣೇಶ ಮೂರ್ತಿಗಳನ್ನು ರಸ್ತೆಗಳಲ್ಲಿ ಇಟ್ಟು ಪೂಜಿಸುವಂತಿಲ್ಲ ಎಂಬ ಆದೇಶವನ್ನು ಆಯಾಯ ಜಿಲ್ಲಾಡಳಿತ ನೀಡಿದೆ. ಹೀಗಾಗಿ ಗಣೇಶ ಮೂರ್ತಿಗಳು ಸರಿಯಾಗಿ ಮಾರಾಟವಾಗುತ್ತಿಲ್ಲ. ಪ್ರತಿ ವರ್ಷ ಕೂಡ ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಕೊಳ್ಳಲು ಜನ ಮುಗಿ ಬೀಳುತ್ತಿದ್ದರು. ಆದರೆ ಈ ವರ್ಷ ಕೊರೊನಾದಿಂದಾಗಿ ಮೂರ್ತಿ ಕೊಳ್ಳಲು ಜನ ಮುಂದೆ ಬರುತ್ತಿಲ್ಲ.
ಗಣೇಶ ಮೂರ್ತಿ ತಯಾರಕರ ಜೀವನ ಕೊರೊನಾದಿಂದಾಗಿ ಬೀದಿಗೆ ಬಿದ್ದಿದೆ. ತಯಾರಿಸಿದ ಮೂರ್ತಿಗಳು ಮಾರಾಟವಾಗುತ್ತಿಲ್ಲ. ಈ ಬಾರಿ ಕಡಿಮೆ ಮೂರ್ತಿಗಳನ್ನು ತಯಾರು ಮಾಡಲಾಗಿದೆ. ಆದರೂ ಮೂರ್ತಿ ಮಾರಾಟ ಆಗುತ್ತಿಲ್ಲ ಎನ್ನುತ್ತಿದ್ದಾರೆ ತಯಾರಕರು. ಬಂಡವಾಳ ಹಾಕಿ ಚಿಕ್ಕ ಚಿಕ್ಕ ಮೂರ್ತಿ ತಯಾರಿಸಿದ್ದೇವೆ. ಆವುಗಳು ಮಾರಾಟವಾಗುತ್ತಿಲ್ಲ ಎನ್ನುತ್ತಿದ್ದಾರೆ ಮಾರಾಟಗಾರರು.