ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದ ರೈತರು ಮತ್ತೆ ಹೋರಾಟಕ್ಕೆ ಕರೆ ನೀಡಿದ್ದು, ಜನವರಿ 26 ಗಣರಾಜ್ಯೋತ್ಸವ ದಿನದಂದು ರಾಜಧಾನಿ ಬೆಂಗಳೂರಿನಲ್ಲಿ ಅನ್ನದಾತರ ಬೃಹತ್ ಪರೇಡ್ ನಡೆಯಲಿದೆ.
ಈ ಕುರಿತು ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದ್ದು, ಕೃಷಿ ಕಾಯ್ದೆ ವಿರೋಧಿಸಿ ಗಣತಂತ್ರ ದಿನದಂದು ರೈತರು ಪ್ರತಿಭಟನೆ ನಡೆಸಲಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ರೈತರು ಟ್ರ್ಯಾಕ್ಟರ್ ಮೂಲಕ ರಾಜಧಾನಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಗಣರಾಜ್ಯೋತ್ಸವ ಭಾಷಣ ಮುಗಿಸುತ್ತಿದ್ದಂತೆಯೇ ರೈತರು ಇಲ್ಲಿ ಪರೇಡ್ ಆರಂಭಿಸಲಿದ್ದಾರೆ ಎಂದರು.
ಬೆಂಗಳೂರಿಗೆ 10 ಸಾವಿರಕ್ಕೂ ಹೆಚ್ಚು ವಾಹನಗಳಲ್ಲಿ ರೈತರು ಆಗಮಿಸಲಿದ್ದಾರೆ. ತುಮಕೂರು ರಸ್ತೆಯ ನೈಸ್ ಜಂಕ್ಷನ್ ನಿಂದ ಪರೇಡ್ ಆರಂಭವಾಗಲಿದ್ದು, ಗೊರಗುಂಟೆ ಪಾಳ್ಯ, ಸರ್ಕಲ್ ಮಾರಮ್ಮ ದೇವಸ್ಥಾನ, ಮಲ್ಲೇಶ್ವರಂ, ಆನಂದ ರಾವ್ ಸರ್ಕಲ್ ಮೂಲಕ ಫ್ರೀಂಡಂ ಪಾರ್ಕ್ ತಲುಪಲಿದ್ದು, ಅಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.