ಬೆಂಗಳೂರು: ಟಾಟಾ ಏಸ್ ವಾಹನ ಅಡ್ಡಗಟ್ಟಿ ದುಷ್ಕರ್ಮಿಗಳು ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಬೆಳಿಗ್ಗೆ ಘಟನೆ ನಡೆದರೂ ಎರಡು ಠಾಣೆ ಪೊಲೀಸರು ತಮ್ಮ ವ್ಯಾಪ್ತಿಗೆ ಬರಲ್ಲವೆಂದು ಹೇಳಿ ಶವ ಸ್ಥಳಾಂತರಿಸದೇ ಕಿತ್ತಾಡುತ್ತಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಅಪ್ಪಕಾರನಹಳ್ಳಿಯಲ್ಲಿ ಬೆಳಿಗ್ಗೆ ದುಷ್ಕರ್ಮಿಗಳು ವಾಹನ ಅಡ್ಡಗಟ್ಟಿ ಚಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಆದರೆ ಈವರೆಗೂ ವಾಹನದಲ್ಲಿರುವ ಶವ ಮಾತ್ರ ಸ್ಥಳಾಂತರವಾಗಿಲ್ಲ. ದೊಡ್ಡಬೆಳವಂಗಲ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದರೂ ಪೊಲೀಸರು ಇದು ತ್ಯಾಮಗೊಂಡ್ಲು ಠಾಣೆ ವ್ಯಾಪ್ತಿಗೆ ಬರುತ್ತೆ. ನಮ್ಮ ಠಾಣಾ ವ್ಯಾಪ್ತಿಗೆ ಬರಲ್ಲ ಎಂದು ಹೇಳುತ್ತಿದ್ದಾರೆ.
ಎರಡೂ ಠಾಣೆಯ ಪೊಲೀಸರು ಪ್ರಕರಣ ತಮ್ಮ ವ್ಯಾಪ್ತಿಗೆ ಬರಲ್ಲ ಎಂದು ಕಿತ್ತಾಟ ನಡೆಸಿದ್ದು ವಾಹನದಲ್ಲಿ ಮೃತದೇಹವನ್ನು ಬಿಟ್ಟಿದ್ದಾರೆ. ಪೊಲೀಸರ ನಡೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.