ಕೊರೊನಾ ಮಹಾಮಾರಿಯಿಂದ ಎಲ್ಲಾ ವಲಯಗಳು ನಷ್ಟ ಅನುಭವಿಸುವಂತಾಗಿದೆ. ಅಡಿಕೆ ಮಾರಾಟಗಾರರಿಗೂ ಕೊರೊನಾ ಎಫೆಕ್ಟ್ ತಟ್ಟಿದೆ. ಆದರೆ ಲಾಕ್ ಡೌನ್ ನಂತರ ಉದ್ಯಮಗಳು ಕೊಂಚ ಚೇತರಿಕೆ ಕಾಣುತ್ತಿವೆ. ಇದರಲ್ಲಿ ಅಡಿಕೆ ಉದ್ಯಮ ಕೂಡ ಒಂದು. ಕಳೆದ ಮೂರು ತಿಂಗಳಿಂದಲೂ ಮಂದ ಗತಿಯಲ್ಲಿ ಮಂಗಳೂರು ಚಾಲಿ ಅಡಿಕೆ ದರ ಏರಿಕೆಯಾಗುತ್ತಲೇ ಇದೆ. ಕ್ಯಾಂಪ್ಕೊ ಶಾಖೆಗಳಲ್ಲಿ 360 ರೂಪಾಯಿಗೆ ಖರೀದಿ ಆಗಿದೆ. ಇನ್ನು ಹಳೆ ಅಡಿಕೆಯ ದರ 375 ರೂಪಾಯಿಯವರೆಗೆ ಏರಿಕೆಯಾಗಿದೆ.
ಕೊರೊನಾದಿಂದ ನಷ್ಟ ಅನುಭವಿಸುತ್ತಿದ್ದ ಅಡಿಕೆ ಬೆಳೆಗಾರರಿಗೆ ನಿಧಾನ ಗತಿಯ ಬೆಲೆ ಏರಿಕೆ ಕೊಂಚ ಉಸಿರು ಬಿಡುವಂತಾಗಿದೆ. ಕಳೆದ ಮೂರು ತಿಂಗಳಲ್ಲಿ ಚಾಲಿ ಅಡಿಕೆ ದರ ಸುಮಾರು 120 ರೂಪಾಯಿಯವರೆಗೆ ಏರಿದಂತಾಗಿದೆ. ಈ ಅಡಿಕೆಯ ಬೆಲೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆಯಂತೆ. ಜೊತೆಗೆ ಬೇಡಿಕೆ ಕೂಡ ಹೆಚ್ಚಾಗುವ ಸಾಧ್ಯತೆ ಕೂಡ ಇದೆಯಂತೆ. ಖಾಸಗಿ ವರ್ತಕರ ಬಳಿ ಈ ಅಡಿಕೆಯ ಬೆಲೆ 380 ರಿಂದ 390 ರೂಪಾಯಿಯವರೆಗೆ ಇದೆ.
ಇತ್ತ ತಾವು ಬೆಳೆದ ಅಡಿಕೆಯನ್ನು ಮಾರುಕಟ್ಟೆಗಳಿಗೆ ತರಲು ಅಡಿಕೆ ಬೆಳೆಗಾರರು ಹಿಂದೇಟು ಹಾಕುತ್ತಿದ್ದಾರೆ. ಇನ್ನಷ್ಟು ದಿನ ಕಾದರೆ ಮತ್ತಷ್ಟು ಬೆಲೆ ಏರಿಕೆಯಾಗಬಹುದು ಎಂಬ ಹಿನ್ನೆಲೆಯಲ್ಲಿ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.