ಚೆನ್ನೈ: ತಮಿಳು ಚಿತ್ರರಂಗದ ಹಾಸ್ಯ ನಟ ವಿವೇಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸ್ಯ ದಿಗ್ಗಜನ ನಿಧನಕ್ಕೆ ತಮಿಳು ಚಿತ್ರರಂಗ ಮಾತ್ರವಲ್ಲ ತೆಲುಗು, ಕನ್ನಡ, ಮಲಯಾಳಂ ಚಿತ್ರರಂಗದ ಗಣ್ಯರು ಹಾಗೂ ಅವರ ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಈ ನಡುವೆ ವಿವೇಕ್ ಅವರು ಸಾಲುಮರದ ತಿಮ್ಮಕ್ಕನ ಬಗ್ಗೆ ಅವರಿಗಿದ್ದ ಅಭಿಮಾನದ ಬಗ್ಗೆ ಹಾಗೂ ಕಾರ್ಯಕ್ರಮವೊಂದರಲ್ಲಿ ಅವರು ಆಡಿದ ಮಾತುಗಳ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ಸಾಲುಮರದ ತಿಮ್ಮಕ್ಕನ ಬಗ್ಗೆ ತಮಿಳು ನಟ ವಿವೇಕ್ ಅವರಿಗೆ ಅಪಾರವಾದ ಅಭಿಮಾನ, ಗೌರವ. ಎರಡು ವರ್ಷದ ಹಿಂದೆ ತಮಿಳು ಚಿತ್ರರಂಗದ ಪ್ರಶಸ್ತಿ ಸಮಾರಂಭವೊಂದರಲ್ಲಿ ಸಾಲುಮರದ ತಿಮ್ಮಕ್ಕ ಅವರನ್ನು ಗೌರವಿಸಲಾಗಿತ್ತು. ಈ ವೇಳೆ ಕನ್ನಡದಲ್ಲಿ ಅವರು ಹೇಳುತ್ತಿದ್ದ ಮಾತುಗಳನ್ನು ವಿವೇಕ್ ತಮಿಳಿಗೆ ಅನುವಾದ ಮಾಡಿದ್ದರು.
ಅಷ್ಟೇ ಅಲ್ಲ. ಸಾಲುಮರದ ತಿಮ್ಮಕ್ಕನ ಜೀವನ-ಸಾಧನೆ ಕುರಿತು ವಿವೇಕ್ ನಿರರ್ಗಳವಾಗಿ ಮಾತನಾಡಿದ್ದರು. ಮದುವೆಯಾಗಿ 25 ವರ್ಷಗಳಾದರೂ ಮಕ್ಕಳಿಲ್ಲ ಎಂಬ ಕೊರಗು ತಿಮ್ಮಕ್ಕರನ್ನು ಕಾಡುತ್ತಿತ್ತು. ಆಗ ಗಿಡಗಳನ್ನು ಬೆಳೆಸಲು ನಿರ್ಧರಿಸಿದರು. ಗಿಡಗಳನ್ನು ನೆಟ್ಟು, ನೀರುಣಿಸಿ, ಬೆಳೆಸಿ ಪೋಷಿಸುವ ಮೂಲಕ ಅವುಗಳಲ್ಲಿ ಮಕ್ಕಳ ಪ್ರೀತಿ ಕಾಣಲಾರಂಭಿಸಿದರು. ಹೀಗೆ ಸಾಲು ಸಾಲು ಗಿಡಗಳನ್ನು ನೆಟ್ಟು ಬೆಳೆಸಿದ ತಿಮ್ಮಕ್ಕ ಸಾಲುಮರದ ತಿಮ್ಮಕ್ಕ ಎಂದೇ ಖ್ಯಾತಿ ಪಡೆದರು. ಅವರಿಂದು ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಪ್ರಸಿದ್ದಿ ಪಡೆದಿದ್ದಾರೆ ಅವರನ್ನರಸಿ ಬಂದ ಸಾಲು ಸಾಲು ಪ್ರಶಸ್ತಿಗಳ ಬಗ್ಗೆಯೂ ವಿವರಿಸಿದ್ದರು. ಇದೀಗ ಪ್ರತಿಭಾನ್ವಿತ ನಟನ ಅಗಲಿಕೆ ಬೆನ್ನಲ್ಲೇ ಕನ್ನಡ ಅಭಿಮಾನಿಗಳು ಸಾಲುಮರದ ತಿಮ್ಮಕ್ಕನ ಬಗ್ಗೆ ಮಾತನಾಡಿದ್ದ ವಿವೇಕ್ ವಿಡಿಯೋವನ್ನು ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.