ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವ ಕಾರಣ ಸರ್ಕಾರ ಈಗ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಇದಕ್ಕಾಗಿ ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಹೊಂದಿರುವ ರೋಗಿ ಹಾಗೂ ಸಾಮಾನ್ಯ ರೋಗಿ ಎಂದು ಎರಡು ಮಾದರಿಯಲ್ಲಿ ಚಿಕಿತ್ಸೆಗೆ ದರ ನಿಗದಿಪಡಿಸಲಾಗಿದ್ದು, ಜೊತೆಗೆ ಸರ್ಕಾರ ಶಿಫಾರಸು ಮಾಡಿದವರಿಗೆ ಉಚಿತವಾಗಿ ಚಿಕಿತ್ಸೆ ಸಿಗಲಿದೆ.
ಆಯುಷ್ಮಾನ್ ಫಲಾನುಭವಿಗೆ ಸಾಮಾನ್ಯ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲು ಪ್ರತಿ ದಿನಕ್ಕೆ 5,200 ರೂ. ತಗುಲಿದರೆ ಸಾಮಾನ್ಯ ರೋಗಿಗಳಿಗೆ 10 ಸಾವಿರ ರೂ. ತಗುಲುತ್ತದೆ. ಇನ್ನು ಹೆಚ್.ಡಿ.ಯು. ವಾರ್ಡ್ ಚಿಕಿತ್ಸೆಗೆ ಆಯುಷ್ಮಾನ್ ಫಲಾನುಭವಿಗಳಿಗೆ 7,500 ರೂ., ಸಾಮಾನ್ಯ ರೋಗಿಗೆ 12 ಸಾವಿರ ರೂ. ವೆಚ್ಚವಾಗುತ್ತದೆ. ವೆಂಟಿಲೇಟರ್ ಇಲ್ಲದ ಐಸಿಯು ವಾರ್ಡಿಗೆ ಆಯುಷ್ಮಾನ್ ಫಲಾನುಭವಿ ವೆಚ್ಚ 8,500 ರೂ. ಗಳಾದರೆ ಸಾಮಾನ್ಯ ರೋಗಿಯ ವೆಚ್ಚ 15 ಸಾವಿರ ರೂ., ವೆಂಟಿಲೇಟರ್ ಸಹಿತ ಐಸಿಯು ವ್ಯವಸ್ಥೆಗೆ ಆಯುಷ್ಮಾನ್ ಫಲಾನುಭವಿ ವೆಚ್ಚ 10 ಸಾವಿರ ರೂ.ಗಳಾದರೆ ಸಾಮಾನ್ಯ ರೋಗಿಯ ವೆಚ್ಚ 25 ಸಾವಿರ ರೂಪಾಯಿಗಳಾಗಿದೆ.
ಬಿಪಿಎಲ್ ಕಾರ್ಡ್ ದಾರರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಅದರ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದ್ದು, ಎಪಿಎಲ್ ಕಾರ್ಡುದಾರರ ಶೇಕಡ 30ರಷ್ಟು ಚಿಕಿತ್ಸಾ ವೆಚ್ಚ ಭರಿಸಲಿದೆ.