ಕೊರೊನಾದಿಂದಾಗಿ ಇಡೀ ದೇಶವೆ ನಲುಗಿ ಹೋಗುತ್ತಿದೆ. ನಮ್ಮ ರಾಜ್ಯಕ್ಕೆ ಬೇರೆ ರಾಜ್ಯದ ಕಂಟಕವೇ ಎದುರಾಗಿದೆ. ಅದರಲ್ಲೂ ಮಹಾರಾಷ್ಟ್ರದ ಮುಂಬೈ ಕಂಟಕ ಕರ್ನಾಟಕಕ್ಕೆ ದೊಡ್ಡ ಹೊಡೆತ ನೀಡುತ್ತಿದೆ. ಪ್ರತಿ ನಿತ್ಯ ಬರುವ ಪಾಸಿಟಿವ್ ಕೇಸ್ ಗಳಲ್ಲಿ ಬಹುತೇಕ ಮಹಾರಾಷ್ಟ್ರದ ನಂಟೇ ಇದೆ. ಹೀಗಾಗಿ ಆ ರಾಜ್ಯದಿಂದ ಬರುವ ಎಲ್ಲರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತಿದೆ.
ಆದರೆ ಇದೀಗ ಬೇರೆ ರಾಜ್ಯದಿಂದ ಬರುವ ಮಂದಿಗೆ ಒಂದಿಷ್ಟು ಷರತ್ತುಗಳ ಜೊತೆಗೆ ಕ್ವಾರಂಟೈನ್ ನಿಯಮವನ್ನು ಬದಲಾವಣೆ ಮಾಡಲಾಗಿದೆ. ಇಷ್ಟು ದಿನ ನಮ್ಮ ರಾಜ್ಯಕ್ಕೆ ಬೇರೆ ರಾಜ್ಯದಿಂದ ಬರುವ ಎಲ್ಲರಿಗೂ ಸಾಂಸ್ಥಿಕ ಕ್ವಾರಂಟೈನ್ ಅಗತ್ಯವಾಗಿತ್ತು. ಆದರೆ ಇದೀಗ ಈ ಕ್ವಾರಂಟೈನ್ ನಿಯಮವನ್ನು ಬದಲಾವಣೆ ಮಾಡಲಾಗಿದೆ. ಆದರೆ ಈ ನಿಯಮ ಮಹಾರಾಷ್ಟ್ರಕ್ಕೆ ಅನ್ವಯಿಸುವುದಿಲ್ಲ.
ಹೌದು, ಮಹಾರಾಷ್ಟ್ರದಿಂದ ಬರುವ ಎಲ್ಲರೂ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಂ ಕ್ವಾರಂಟಿನ್ ಒಳಪಡಲೇ ಬೇಕು. ಇನ್ನು ಈ ರಾಜ್ಯ ಹೊರತುಪಡಿಸಿ ಬೇರೆ ರಾಜ್ಯದಿಂದ ಬರುವವರಿಗೆ ಹೋಂ ಕ್ವಾರಂಟೈನ್ ಮಾತ್ರ ಇರುತ್ತದೆ. ಹಾಗೂ ಸೇವಾ ಸಿಂಧು ಆಪ್ ನಲ್ಲಿ ನೋಂದಣಿ ಅಗತ್ಯವಾಗಿರುತ್ತದೆ. ಬೇರೆ ರಾಜ್ಯದಿಂದ ಬರುವ ವೇಳೆ ಚೆಕ್ ಪೋಸ್ಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಈ ವೇಳೆ ಜ್ವರದ ಲಕ್ಷಣಗಳು ಇದ್ದರೆ ಕೋವಿಡ್ ಟೆಸ್ಟ್ ಮಾಡಿಸಲೇಬೇಕು.