ಕೊರೊನಾ ಮಹಾಮಾರಿ ಆರ್ಭಟ ರಾಜ್ಯದಲ್ಲಿ ಕೊಂಚ ಕಡಿಮೆಯಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ ಕ್ರಿಸ್ ಮಸ್ ಹಬ್ಬ ಹಾಗೂ ಹೊಸ ವರ್ಷ ಇರೋದ್ರಿಂದ ಅಲ್ಲದೆ ಚಳಿಗಾಲ ಪ್ರಾರಂಭವಾಗಿರೋದ್ರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹೀಗಾಗಿ ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಆಚರಣೆಗೆ ಗೈಡ್ ಲೈನ್ಸ್ ಅನ್ನು ಸರ್ಕಾರ ಬಿಡುಗಡೆ ಮಾಡಿದೆ.
ಗೈಡ್ ಲೈನ್ ಪ್ರಕಾರ ಕ್ರಿಸ್ಮಸ್ ಸಮಯದಲ್ಲಿ ಕ್ರೈಸ್ತ ಧರ್ಮದ ಬಾಂಧವರು ಚರ್ಚ್ಗಳಲ್ಲಿ ಒಮ್ಮೆಲೆ ಹೆಚ್ಚು ಜನರು ಸೇರಬಾರದು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮೇಲ್ವಿಚಾರಕರು ಹಾಗೂ ಆಯೋಜಕರು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಸೋಂಕು ತಡೆಗಟ್ಟಲು ಸಾರ್ವಜನಿಕರ ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧ ಮಾಡಲಾಗಿದ್ದು, ಸಾರ್ವಜನಿಕರು ಇದನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ.
ಇನ್ನು ಹೊಸ ವರ್ಷಕ್ಕೂ ಕೂಡ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ. ಇಲ್ಲಿಯೂ ಕೂಡ ಹಲವಾರು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದೆ. ಡಿ. 30 ರಿಂದ ಜನವರಿ 2 ರವರೆಗೆ ಕ್ಲಬ್, ಪಬ್, ರೆಸ್ಟೋರೆಂಟ್ ಗಳಲ್ಲಿ ಡಿಜೆ, ಡಾನ್ಸ್, ಗುಂಪು ಸೇರುವಿಕೆ ನಿಷೇಧ ಮಾಡಲಾಗಿದೆ. ಹೊಸ ವರ್ಷದ ಸ್ಪೆಷಲ್ ಕಾರ್ಯಕ್ರಮಗಳ ಆಯೋಜನೆ ಕೂಡ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.
ಆಯ್ದ ರಸ್ತೆ ಸ್ಥಳಗಳಿಗೆ ಸಂಬಂಧಿಸಿದಂತೆ, ಸ್ಥಳೀಯ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಹೆಚ್ಚಿನ ನಿರ್ಬಂಧಗಳನ್ನು ವಿಧಿಸಬಹುದು. ಬಹುಮುಖ್ಯವಾಗಿ 65ವರ್ಷದ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರಬೇಕು.
ಹೋಟೆಲ್, ಪಬ್, ಪಾರ್ಟಿ ಹಾಲ್, ರೆಸ್ಟೋರೆಂಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಹೋಟೆಲ್, ಮಾಲ್, ಪಬ್, ರೆಸ್ಟೋರೆಂಟ್ ಅಂತಹಾ ಪ್ರದೇಶಗಳು ಸರತಿಯಲ್ಲಿ ಜನರನ್ನು ಒಳಬಿಡುವ ವ್ಯವಸ್ಥೆ ಮಾಡಬೇಕು.
ಸಾಧ್ಯವಿದ್ದೆಡೆ ಮುಂಗಡ ಬುಕ್ಕಿಂಗ್, ಟೋಕನ್ ವ್ಯವಸ್ಥೆ, ಆನ್ ಲೈನ್ ಬುಕಿಂಗ್ ಮಾಡಬಹುದು. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು. ಈ ಎಲ್ಲಾ ಸಂದರ್ಭಗಳಲ್ಲಿ ಕಡ್ಡಾಯವಾಗಿ ಪಾಲಿಕೆ, ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ, ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ ರೂಪಿಸಿರುವ ಎಲ್ಲಾ ನಿಯಮಗಳ ಪಾಲನೆ ಆಗಲೇಬೇಕು ಎಂದು ಗೈಡ್ಲೈನ್ಸ್ನಲ್ಲಿ ತಿಳಿಸಿದೆ. ಅಲ್ಲದೆ ನಿಯಮಗಳನ್ನು ತಪ್ಪಿದವರು ದಂಡ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ ಎಂದೂ ರಾಜ್ಯ ಸರ್ಕಾರ ತಿಳಿಸಿದೆ.