ಬೆಂಗಳೂರು: ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದರೂ ಕೂಡ ಕಾಂಗ್ರೆಸ್ ಶಾಸಕ ವಿಧಾನಮಂಡಲ ಅಧಿವೇಶನದ ಮೂರನೇ ದಿನವೂ ಕಲಾಪಕ್ಕೆ ಹಾಜರಾಗುವ ಮೂಲಕ ಎಲ್ಲರಲ್ಲೂ ಆತಂಕಕ್ಕೀಡು ಮಾಡಿದ್ದಾರೆ. ಶಾಸಕರ ಈ ನಡೆಗೆ ಸದನದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಈ ಬಗ್ಗೆ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ಕೋವಿಡ್ ಟೆಸ್ಟ್ ನಲ್ಲಿ ತಮಗೆ ಪಾಸಿಟಿವ್ ಬಂದಿದ್ದಾಗಿ ಸೆ.19ರಂದು ಶಾಸಕ ಖರ್ಗೆ ಟ್ವೀಟ್ ಮಾಡಿದ್ದರಲ್ಲದೇ ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಆದರೆ 14 ದಿನಗಳ ಕಾಲ ಕ್ವಾರಂಟೈನ್ ಕೂಡ ಆಗದೆ ಸೆ.22 ರಂದು ಅಧಿವೇಶನಕ್ಕೆ ಹಾಜರಾಗಿದ್ದಾರೆ. ಅಧಿವೇಶಕ್ಕೆ ಬರುವವರು ಕೋವಿಡ್ ನೆಗೆಟಿವ್ ರಿಪೋರ್ಟ್ ತರಬೇಕು ಎಂಬ ನಿಯಮವಿದ್ದಾಗ್ಯೂ ಶಾಸಕರು ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಪ್ರಿಯಾಂಕ್ ಖರ್ಗೆ, ಆರಂಭದಲ್ಲಿ ನನಗೆ ಕೋವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿತ್ತು. ಆದರೆ ಎರಡನೇ ಬಾರಿ ಸಿಎಂ ಯಡಿಯೂರಪ್ಪನವರಿಗೆ ಪರೀಕ್ಷಿಸಿದ ವೈದ್ಯರೇ ನಡೆಸಿದ ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದೆ. ಹಾಗಾಗಿ ನನಗೆ ಕೊರೊನಾ ಸೋಂಕು ಇಲ್ಲ ಎಂಬುದು ದೃಢವಾಗಿದ್ದು, ಯಾವುದೇ ರೋಗ ಲಕ್ಷಣಗಳು ಕೂಡ ಇಲ್ಲ. ವರದಿಯನ್ನು ಹಿಡಿದೇ ಸದನಕ್ಕೆ ಹೋಗಿದ್ದಾಗಿ ತಿಳಿಸಿದ್ದಾರೆ.