ಬೆಳಗಾವಿ: ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ಬೆಳೆ ಹಾನಿ ಸರ್ವೆ ನಡೆಸಲು ಸೂಚಿಸಿದ್ದೇನೆ. ಜನಪ್ರತಿನಿಧಿಗಳು, ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ನೆರೆ ಹಾನಿ ಹಾಗೂ ಪರಿಹಾರದ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಳಗಾವಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದ ಸಿಎಂ ಯಡಿಯೂರಪ್ಪ, ಅಧಿಕಾರಿಗಳು ಹಾಗೂ ಸಚಿವರ ಜತೆ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ಕೋವಿಡ್ ಕಾರಣದಿಂದ ಪರಿಹಾರ ತಡವಾಗಿದೆ. ಸಂಕಷ್ಟದ ಸಮಯದಲ್ಲೂ ಸಂಬಳ ನೀಡುತ್ತಿದ್ದೇವೆ. ನೆರೆ ಪರಿಹಾರವನ್ನೂ ಶೀಘ್ರವಾಗಿ ನೀಡುತ್ತೇವೆ ಎಂದರು.
ಈಗ ವೈಮಾನಿಕ ಸಮೀಕ್ಷೆ ಮಾಡಿ, ಮಳೆಹಾನಿ ಪ್ರದೇಶವನ್ನು ಪರಿಶೀಲನೆ ಮಾಡುತ್ತೇನೆ. ಬಳಿಕ ಬೆಂಗಳೂರಿಗೆ ತೆರಳಿ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಇನ್ನಷ್ಟು ಚರ್ಚೆ ನಡೆಸಿ ತುರ್ತಾಗಿ ಪರಿಹಾರ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.
ಕೋವಿಡ್ ಸಮಸ್ಯೆಯಿಂದಾಗಿ ಸರ್ಕಾರದಲ್ಲೂ ಆರ್ಥಿಕ ಸಮಸ್ಯೆಯಿರುವುದು ಗೊತ್ತಿರುವ ವಿಚಾರ. ಆದರ ನಡುವೆಯೂ ಪರಿಹಾರ ಹಾಗೂ ಹೆಚ್ಚಿನ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ದೇಶದಲ್ಲೇ ಕರ್ನಾಟಕದಲ್ಲಿ ಕೋವಿಡ್ ಸಮಸ್ಯೆ, ಆರ್ಥಿಕ ಬಿಕ್ಕಟ್ಟಿನ ನಡುವೆಯೂ ನಾವು ಸರ್ಕಾರಿ ನೌಕರರಿಗೆ ಸಂಬಳ ನಿಲ್ಲಿಸಿಲ್ಲ. ಅದೇ ರೀತಿ ಶೀಘ್ರದಲ್ಲಿ ನೆರೆ ಸಂತ್ರಸ್ತರಿಗೂ ತುರ್ತಾಗಿ ಪರಿಹಾರ ನೀಡುವ ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದರು.
ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ಪರಿಹಾರ ನಿಧಿಯನ್ನೂ ಪ್ರವಾಹ ಪರಿಹಾರಕ್ಕಾಗಿ ಬಳಸುಕೊಳ್ಳಲಾಗುವುದು. ಕೇಂದ್ರ ಸರ್ಕಾರಕ್ಕೂ ಬಾಕಿ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇವೆ. 2-3 ತಿಂಗಳಲ್ಲಿ ರಾಜ್ಯದ ಆರ್ಥಿಕ ಸಮಸ್ಯೆ ಸರಿ ಹೋಗುವ ವಿಶ್ವಾಸವಿದೆ ಎಂದು ಹೇಳಿದರು.