ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಎರಡನೇ ಅಲೆ ಹೆಚ್ಚುತ್ತಿದ್ದು, ಎಲ್ಲರೂ ಕೊರೊನಾ ಲಸಿಕೆಗಳನ್ನು ಹಾಕಿಸಿಕೊಳ್ಳುವ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕರೆ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಗಳ ಸಂಘಟನೆಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಯುಗಾದಿ ಹಬ್ಬದ ಪ್ರಸ್ತುತ ಸಂದರ್ಭದಲ್ಲಿ ಕೋವಿಡ್ ಎಂಬುದು ಬೇವು. ಲಸಿಕೆ ಎಂಬುದೇ ಬೆಲ್ಲ. ಹಾಗಾಗಿ ಎಲ್ಲರೂ ಬೆಲ್ಲದಂತಿರುವ ಲಸಿಕೆ ಪಡೆದು ಕೊರೊನಾ ನಿಯಂತ್ರಿಸಿ ಎಂದು ಹೇಳಿದರು.
‘ಕೊರೊನಾ’ ಹತ್ತಿರವೂ ಸುಳಿಯಬಾರದೆಂದ್ರೆ ಹೀಗೆ ಮಾಡಿ
ಖಾಸಗಿ ಆಸ್ಪತ್ರೆಗಳು ಒಂದು ವಾರದೊಳಗೆ 50% ರಷ್ಟು ಹಾಸಿಗೆ ನೀಡಲು ಒಪ್ಪಿಕೊಂಡಿದ್ದಾರೆ. ಅಲ್ಪ ರೋಗಲಕ್ಷಣ ಹಾಗೂ ಲಕ್ಷಣರಹಿತ ರೋಗಿಗಳಿಗೆ ಹೋಟೆಲ್ ಗಳಲ್ಲಿ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿದೆ ಎಂದರು. ರಾಜ್ಯಕ್ಕೆ ರೆಮಿಡಿಸಿವಿರ್ ಔಷಧಿ ಅಗತ್ಯವಿದ್ದು, ಕಂಪನಿಗಳು ಈ ಔಷದಿ ತಯಾರಿಕೆ, ಪೂರೈಕೆಯನ್ನು ನಿಲ್ಲಿಸಿವೆ. ಹಾಗಾಗಿ ಔಷಧಿ ಲಭ್ಯವಾಗುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಹೇಳಿವೆ. ಈ ಬಗ್ಗೆ ಡ್ರಗ್ ಕಂಟ್ರೋಲರ್ ಜೊತೆ ಚರ್ಚಿಸಿ ಖಾಸಗಿ ಆಸ್ಪತ್ರೆಗಳಿಗೆ ಔಷಧ ಪೂರೈಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಂದಿನ ಎರಡು ತಿಂಗಳ ಕಾಲ ಕೊರೊನಾ ಸ್ಥಿತಿಗತಿ ಬಗ್ಗೆ ವರದಿ ನೀಡಿದೆ. ಈಗಾಗಲೇ ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದ ಮತ್ತೆ ಲಾಕ್ ಡೌನ್ ಜಾರಿ ಮಾಡುವ ಉದ್ದೇಶವಿಲ್ಲ. ಜನರೇ ಎಚ್ಚೆತ್ತುಕೊಂಡು ಕಟ್ಟುನಿಟ್ಟಾಗಿ ಕೋವಿಡ್ ನಿಯಮ ಪಾಲಿಸಿ ಸ್ವಯಂ ನಿರ್ಬಂಧಗಳನ್ನು ವಿಧಿಸಿಕೊಳ್ಳಬೇಕು. ಹಬ್ಬದ ಸಂದರ್ಭದಲ್ಲಿ ಹಳ್ಳಿಗಳಿಗೆ ತೆರಳಿ ಕೊರೊನಾ ಹರಡುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.