ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಮಧ್ಯೆ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಕೋವಿಡ್ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕೊಲೆ ಯತ್ನದ ಆರೋಪ ಹೊತ್ತಿದ್ದ 30 ವರ್ಷದ ಈ ವ್ಯಕ್ತಿಗೆ ಸೋಂಕು ಧೃಡಪಟ್ಟ ಕಾರಣ ಚಿಕಿತ್ಸೆಗಾಗಿ ವಿಕ್ಟೋರಿಯಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತ ಮದ್ಯಪಾನ ಮಾಡಲು ಹಾತೊರೆಯುತ್ತಿದ್ದು, ಹೀಗಾಗಿ ಸೆಕ್ಯುರಿಟಿಯವರನ್ನು ತಳ್ಳಿ ಪರಾರಿಯಾಗಿದ್ದ ಎನ್ನಲಾಗಿದೆ.
ಕೊನೆ ಕ್ಷಣದಲ್ಲಿ ಆತನನ್ನು ಗಮನಿಸಿ ಸೆಕ್ಯೂರಿಟಿಯವರು ಹಿಡಿಯಲು ಮುಂದಾದರೂ ಪ್ರಯೋಜನವಾಗಿರಲಿಲ್ಲ. ಇದಾದ 7 ಗಂಟೆ ಬಳಿಕ ಸೋಂಕಿತನನ್ನು ವಶಕ್ಕೆ ಪಡೆಯಲಾಗಿದ್ದು, ಈ ಅವಧಿಯಲ್ಲಿ ಆತ ಯಾರ್ಯಾರ ಸಂಪರ್ಕಕ್ಕೆ ಬಂದಿದ್ದನೆಂಬ ಕುರಿತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಈತ ತನ್ನ ಸ್ನೇಹಿತನಿಗೆ ಮದ್ಯ ತರಲು ಹೇಳಿದ್ದು, ಆತ ನೀಡಿದ ಮಾಹಿತಿ ಮೇರೆಗೆ ಸೋಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.