ಕೊರೊನಾ ಮಹಾಮಾರಿಯ ಛಾಯೆ ಇನ್ನೂ ದೇಶ ಬಿಟ್ಟು ತೊಲಗುತ್ತಿಲ್ಲ. ಇತ್ತ ಕೊರೊನಾ ವಾರಿಯರ್ಸ್ ಗಳು ಕೊರೊನಾ ವಿರುದ್ಧದ ಹೋರಾಟ ಮುಂದುವರೆಸಿದ್ದಾರೆ. ಇದರ ನಡುವೆ ಸೋಂಕಿತರ ತಲೆನೋವು ಮತ್ತೊಂದು ಕಡೆಯಾಗಿದೆ. ಸೋಂಕಿನಿಂದ ಬಳಲುವ ಅನೇಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಕೆಲವೊಬ್ಬರ ಹುಚ್ಚಾಟ ಮುಂದುವರೆದಿದೆ.
ಹೌದು, ಇದಕ್ಕೆ ಉದಾಹರಣೆ ಎಂಬಂತೆ ಕೋಲಾರದಲ್ಲಿನ ಸೋಂಕಿತ ವ್ಯಕ್ತಿಯೊಬ್ಬ ಎಸ್ಕೇಪ್ ಆಗಿದ್ದು. ಬಂಗಾರಪೇಟೆ ಪಟ್ಟಣದಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡಲು ಜೂನ್ 3 ರಂದು ತುಮಕೂರಿಂದ ಬಂದಿದ್ದ ವ್ಯಕ್ತಿಯಲ್ಲಿ ಕೊರೊನಾ ಇರುವುದು ಧೃಡಪಟ್ಟಿತ್ತು. ಕೊರೊನಾ ಇದೆ ಎನ್ನುತ್ತಿದ್ದಂತೆಯೇ ಈ ವ್ಯಕ್ತಿ ಪರಾರಿಯಾಗಿದ್ದ. ಕಳೆದ 5 ದಿನಗಳಿಂದಲೂ ಈ ವ್ಯಕ್ತಿಗಾಗಿ ಹುಡುಕಾಟ ನಡೆದಿತ್ತು. ಇದೀಗ ಸೋಂಕಿತನನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೇಷಂಟ್ 4863 ವ್ಯಕ್ತಿ ಇದೀಗ ಆಂಧ್ರದ ವಿಕೋಟದಲ್ಲಿ ಪತ್ತೆಯಾಗಿದ್ದಾನೆ. ತನ್ನ ಸ್ನೇಹಿತನ ಜೊತೆಯಲ್ಲಿ ಆಂಧ್ರದ ಕುಪ್ಪಂಗೆ ತೆರಳಿ ಅಲ್ಲಿಂದ ತಿರುಪತಿಗೆ ಹೋಗಿ ವಾಪಾಸ್ ವಿಕೋಟಗೆ ಬಂದಿದ್ದನೆಂದು ತಿಳಿದು ಬಂದಿದೆ. ಆದರೆ ಈ ವ್ಯಕ್ತಿ ತಿರುಪತಿ ದೇವಸ್ಥಾನಕ್ಕೆ ಹೋಗಿದ್ದನೋ ಇಲ್ಲವೋ ಎಂಬ ಮಾಹಿತಿ ಸ್ಪಷ್ಟವಾಗಿ ತಿಳಿದಿಲ್ಲ.