ಇಂದಿನ ದಿನಗಳಲ್ಲಿ ಮಾನವೀಯತೆ ಅನ್ನೋದು ಮರೆಯಾಗಿರುವುದು ಗೊತ್ತಿರುವ ವಿಚಾರವೇ. ಯಾರಾದರೂ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೆ ನಮಗ್ಯಾಕೆ ಅನ್ನೋವ್ರೆ ಹೆಚ್ಚು. ಅದರಲ್ಲೂ ಅಪಘಾತವಾದಾಗ ಆ ವ್ಯಕ್ತಿಯನ್ನು ಆರೈಕೆ ಮಾಡೋದು ಬಿಟ್ಟು ಮೊಬೈಲ್‌ನಲ್ಲಿ ವಿಡಿಯೋ ಮಾಡುವ ಧಾವಂತದಲ್ಲೇ ಅನೇಕ ಜನ ಇರ್ತಾರೆ. ಇಂತವರ ಮಧ್ಯೆ ಒಳ್ಳೆಯವರೂ ಇದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಬೆಂಗಳೂರು ಪೊಲೀಸರು.
ಹೌದು, ಆಗಸ್ಟ್ 16ರಂದು ಮಾರತ್ ಹಳ್ಳಿ ಬಳಿ ಒಂದು ಅಪಘಾತ ನಡೆಯುತ್ತದೆ. ವೇಗವಾಗಿ ಬಂದ ಬೈಕ್ ಸಂಜಯ್ ಎಂಬ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಆ ವ್ಯಕ್ತಿ ಗಂಭೀರವಾಗಿ ಗಾಯಗೊಳ್ಳುತ್ತಾನೆ. ಗಾಯಗೊಂಡ ವ್ಯಕ್ತಿಯನ್ನು ಓಲ್ಡ್ ಏರ್ಪೋರ್ಟ್ ಸಂಚಾರಿ ಪೊಲೀಸರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾರೆ. ದುರಾದೃಷ್ಟ ಎನ್ನುವಂತೆ ಆ ವ್ಯಕ್ತಿ ಕೋಮಾಗೆ ಹೋಗುತ್ತಾನೆ. ಆಸ್ಪತ್ರೆಗೆ ಸೇರಿಸಿದ ನಂತರ ಕೋಮಾಗೆ ಜಾರಿದ ವ್ಯಕ್ತಿಯನ್ನು ಈ ಸಂಚಾರಿ ಪೊಲೀಸರು ಆರೈಕೆ ಮಾಡುತ್ತಾರೆ.
ಸಂಜಯ್ ಸುಮಾರು 15 ದಿನಗಳ ನಂತರ ಕೋಮಾದಿಂದ ಎಚ್ಚರವಾಗುತ್ತಾರೆ. ಅಲ್ಲಿಯವರೆಗೂ ಕಾನ್‌ಸ್ಟೆಬಲ್ ಕಾಶಪ್ಪ, ಚೀರಂಜೀವಿ ಹಾಗೂ ಶ್ರೀಕಾಂತ್ ಸೇರಿದಂತೆ ಅವರ ಸಿಬ್ಬಂದಿ ಆತನನ್ನು ಮಗುವಿನಂತೆ ಆರೈಕೆ ಮಾಡುತ್ತಾರೆ. ಇನ್ನು ಈ ಸಂಜಯ್ ಮಹರಾಷ್ಟ್ರ ಮೂಲದವರು. ಈ ವ್ಯಕ್ತಿ ಚೇತರಿಸಿಕೊಂಡ ನಂತರ ಆತನನ್ನು ಮಹರಾಷ್ಟ್ರಕ್ಕೆ ಕಳುಹಿಸಿದ್ದಾರೆ. ಇಂದು ಆತ ಜೀವಂತವಾಗಿ ಇದ್ದಾರೆ ಎಂದರೆ ಅದಕ್ಕೆ ಈ ಪೊಲೀಸರೇ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ.