ಬೆಂಗಳೂರು: ಕೊರೊನಾ ಹೊಸ ರೂಪಾಂತರ ದೇಶದ ಜನತೆಯಲ್ಲಿ ಆತಂಕವನ್ನು ಹೆಚ್ಚಿಸಿದೆ. ಈಗಾಗಲೇ ಬ್ರಿಟನ್ ನಿಂದ ಚೆನ್ನೈಗೆ ಬಂದಿರುವ ವ್ಯಕ್ತಿಯಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಹಾಗಾಗಿ ರಾಜ್ಯದಲ್ಲಿ ಕಟ್ಟೆಚ್ಚರ ಅಗತ್ಯ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಕೊರೊನಾ ಸೋಂಕು ಹೊಸ ರೂಪದಲ್ಲಿ ಹರಡುತ್ತಿದೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಕಡಿಮೆಯೇ. ಯಾರೇ ಹೊರಗಿನಿಂದ ಬಂದರೂ ತಪಾಸಣೆ ನಡೆಸಲಾಗುತ್ತದೆ. ಮುಂಜಾಗೃತಾ ಕ್ರಮವಾಗಿ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ತಪಾಸಣೆ ಕಡ್ಡಾಯಗೊಳಿಸಲಾಗುತ್ತದೆ. ರಾಜ್ಯಕ್ಕೆ ಕೊರೊನಾ ರೂಪಾಂತರ ವೈರಾಣು ಹರಡದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಈ ಬಾರಿ ಕೊರೊನಾ ಇರುವುದರಿಂದ ಹಾಗೂ ಆರೋಗ್ಯದ ದೃಷ್ಟಿಯಿಂದ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ. ಯಾರೂ ಕೂಡ ಹೊಸ ವರ್ಷಾಚರಣೆ ಮಾಡದಂತೆ ಈಗಾಗಲೇ ಜನರಲ್ಲಿ ಮನವಿ ಮಾಡಲಾಗಿದೆ. ಇನ್ನು ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಅಗತ್ಯವಿಲ್ಲ ಎಂದು ಹೇಳಿದರು.