ಆರಂಭದ ದಿನಗಳಲ್ಲಿ ಯಾವುದೇ ಕೊರೊನಾ ಸೋಂಕು ಪೀಡಿತರು ಇಲ್ಲದೇ ಇದ್ದ ಕಾರಣ ಹಸಿರು ವಲಯದಲ್ಲಿದ್ದ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 83 ಕ್ಕೆ ಏರಿಕೆಯಾಗಿದ್ದು, ಈ ಪೈಕಿ 31 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.
ಹೊರ ರಾಜ್ಯಗಳಿಂದ ಬಂದವರೇ ಸೋಂಕು ಪೀಡಿತರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದು, ಇದರ ಮಧ್ಯೆ ಗುರುವಾರದಂದು ಸ್ವಾಮೀಜಿಯೊಬ್ಬರು ಕೊರೊನಾ ಸೋಂಕಿಗೊಳಗಾಗಿರುವುದು ಪತ್ತೆಯಾಗಿದೆ. ಆದರೆ ಸ್ವಾಮೀಜಿಯವರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲವೆಂದು ಹೇಳಲಾಗಿದ್ದು, ಹೀಗಾಗಿ ಅವರಿಗೆ ಸೋಂಕು ಎಲ್ಲಿಂದ ತಗುಲಿದೆ ಎಂಬ ಪ್ರಶ್ನೆ ಕಾಡುತ್ತಿದೆ.
ಜೊತೆಗೆ ಸ್ವಾಮೀಜಿಯವರ ಆಶ್ರಮಕ್ಕೆ ಭಕ್ತರು ಭೇಟಿ ನೀಡಿದ್ದ ಕಾರಣ ಆತಂಕಕ್ಕೆ ಕಾರಣವಾಗಿದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ 52 ವರ್ಷದ ಸ್ವಾಮೀಜಿಯವರನ್ನು ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಇದೀಗ ಆಶ್ರಮದ 100ಮೀಟರ್ ಸುತ್ತಮುತ್ತ ಸೀಲ್ ಡೌನ್ ಮಾಡಲಾಗಿದೆಯಲ್ಲದೆ ಪ್ರಮುಖ ಗೇಟನ್ನು ಬಂದ್ ಮಾಡಲಾಗಿದೆ.