ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನೇ ದಿನೇ ವ್ಯಾಪಕವಾಗುತ್ತಿದ್ದು, ಬುಧವಾರ ಒಂದೇ ದಿನ 8,642 ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 2,49,590 ಕ್ಕೆ ತಲುಪಿದ್ದು, ಈ ಮಹಾಮಾರಿಗೆ ಈವರೆಗೆ 4,327 ಮಂದಿ ಮೃತಪಟ್ಟಿದ್ದಾರೆ.
ಇದರ ಮಧ್ಯೆ ಆರೋಗ್ಯ ಇಲಾಖೆ ಮಹತ್ವದ ಸೂಚನೆಯೊಂದನ್ನು ನೀಡಿದ್ದು, ರಾಜ್ಯದಲ್ಲಿ ಈವರೆಗೆ ಕೊರೊನಾಗೆ ಮೃತಪಟ್ಟವರ ಪೈಕಿ ಬಹುತೇಕರು 50 ವರ್ಷ ಮೇಲ್ಪಟ್ಟವರು ಹಾಗೂ ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಾಗಿರುವುದರಿಂದ ಅಂತವರು ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದೆ.
ಅದರಲ್ಲೂ ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ದೀರ್ಘಕಾಲೀನ ರೋಗಗಳಿಂದ ಬಳಲುತ್ತಿರುವವರು ಸೋಂಕಿಗೆ ಬಹುಬೇಗ ತುತ್ತಾಗುವ ಸಾಧ್ಯತೆಯಿರುವುದರಿಂದ ಅನಾವಶ್ಯಕವಾಗಿ ಮನೆಯಿಂದ ಹೊರ ಬೀಳಬಾರದೆಂದು ಹೇಳಲಾಗಿದೆ.
ಯಾರಾದರೂ ಇತರೆ ಕಾಯಿಲೆಗೆ ಶಸ್ತ್ರಚಿಕಿತ್ಸೆಗೆ ಒಳಪಡುವ ಸಾಧ್ಯತೆಯಿದ್ದರೆ ಅಂಥವರು ವೈದ್ಯರ ಸಲಹೆ ಪಡೆದು ಶಸ್ತ್ರಚಿಕಿತ್ಸೆ ಮುಂದೂಡುವುದು ಸೂಕ್ತ ಎಂದು ತಿಳಿಸಲಾಗಿದೆ. ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.