ಕೊರೊನಾ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದರೆಂಬ ಕಾರಣಕ್ಕೆ ಮಾಲೀಕನೊಬ್ಬ ತನ್ನ ಮನೆಯಲ್ಲಿದ್ದ ವೈದ್ಯರನ್ನು ರಾತ್ರೋರಾತ್ರಿ ಮನೆಯಿಂದ ಹೊರಗಟ್ಟಿರುವ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.
ಮೂರು ದಿನಗಳ ಹಿಂದೆ ಈ ವೈದ್ಯರು ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆ ನೀಡಿದ್ದು, ಬಳಿಕ ಆ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಲ್ಯಾಬ್ ಟೆಕ್ನಿಷಿಯನ್ ಬಾಡಿಗೆಗೆ ಪಡೆದಿದ್ದ ಮನೆಯಲ್ಲಿ ಆತನ ಜೊತೆ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದರು.
ಈ ಮಾಹಿತಿ ತಿಳಿದ ಮನೆ ಮಾಲೀಕ ಶುಕ್ರವಾರ ರಾತ್ರಿ ಮನೆ ಬಳಿಬಂದು ವೈದ್ಯರು ಹಾಗೂ ಲ್ಯಾಬ್ ಟೆಕ್ನಿಷಿಯನ್ ಗೆ ನಿಂದಿಸಿ ರಾತ್ರೋರಾತ್ರಿ ಮನೆ ಖಾಲಿ ಮಾಡಿಸಿದ್ದಾರೆ. ಬಳಿಕ ವೈದ್ಯರು ಲ್ಯಾಬ್ ಟೆಕ್ನಿಷಿಯನ್ ಜೊತೆ ಲಾಡ್ಜ್ ಒಂದರಲ್ಲಿ ಉಳಿದುಕೊಂಡರೆಂದು ಹೇಳಲಾಗಿದೆ.