ಕೊರೊನಾ ಬಂದರೆ ಸಾಕು ಆ ಕುಟುಂಬದವರನ್ನು ನಿಕೃಷ್ಟವಾಗಿ ಕಾಣುವುದನ್ನು ನೋಡಿದ್ದೇವೆ. ಇನ್ನು ಕೊರೊನಾ ಬಂದ ವ್ಯಕ್ತಿ ಗುಣಮುಖವಾಗಿ ಬಂದರೂ ಆತನನ್ನು ರೋಗಿಷ್ಟನಂತೆಯೇ ನೋಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದನ್ನು ಬದಲಾಯಿಸಲು ಸರ್ಕಾರ ಸೇರಿದಂತೆ ಅನೇಕ ಮಂದಿ ಎಷ್ಟೇ ಅರಿವು ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ. ಇಂತವರ ನಡುವೆ ಇದೀಗ ಒಬ್ಬ ಮನೆ ಮಾಲೀಕ ಮಾಡಿರುವ ಕೆಲಸ ನಿಜಕ್ಕೂ ಶ್ಲಾಘನೀಯ.
ಹೌದು, ಬೆಂಗಳೂರು ನಗರದ ಬೊಮ್ಮನಹಳ್ಳಿ ಸಮೀಪದ ಹೊಂಗಸಂದ್ರ ವಾಸಿ 54 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿತ್ತು. ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಇತ್ತ ಕುಟುಂಬಸ್ಥರಲ್ಲಿ ಭಯದ ವಾತಾವರಣ ಮೂಡಿದಂತೂ ಸತ್ಯ. ಒಂದು ಕಡೆ ಕೊರೊನಾ, ಮತ್ತೊಂದು ಕಡೆ ಮನೆಯಿಂದ ಆಚೆ ಹಾಕುತ್ತಾರೆಂಬ ಭಯ. ಆದರೆ ಬಾಡಿಗೆ ಕೊಟ್ಟಿದ್ದ ಮನೆ ಮಾಲೀಕ ಸೋಮಶೇಖರ್ ಎಂಬುವವರು, ಮಾನವೀಯತೆಯ ಧರ್ಮ ಪಾಲಿಸಿ ಆ ಕುಟುಂಬಕ್ಕೆ ಆಸರೆಯಾಗಿದ್ದಾರೆ.
ಅಷ್ಟೆ ಅಲ್ಲ, ಆ ಮನೆಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಇನ್ನು ಬಾಡಿಗೆ ಕೂಡ ಬೇಡ ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಕೊರೊನಾ ಗೆದ್ದು ಗುಣಮುಖರಾಗಿ ವಾಪಸ್ ಬಂದ ಆ ಕುಟುಂಬದ ವ್ಯಕ್ತಿಗೆ ಇಡೀ ಏರಿಯಾದವರು ಭವ್ಯ ಸ್ವಾಗತ ಕೋರಿದ್ದಾರೆ. ಈ ಮೂಲಕ ನಿಕೃಷ್ಟವಾಗಿ ನೋಡುವವರಿಗೆ ಸರಿಯಾಗಿ ಪಾಠ ಹೇಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.