ಕೊರೊನಾದಿಂದಾಗಿ ಇಡೀ ದೇಶವೇ ನಲುಗುತ್ತಿದೆ. ಇಂತಹ ಸಮಯದಲ್ಲಿ ಬೆಲೆ ಏರಿಕೆ ಜನರ ಮೇಲೆ ಒತ್ತಡ ತರುತ್ತಿದೆ. ಇದೀಗ ಬಿಬಿಎಂಪಿ ಕೂಡ ನಗರದ ಜನರಿಗೆ ಕೊರೊನಾ ಸಂಕಷ್ಟದಲ್ಲಿ ಶಾಕ್ ನೀಡಿದೆ. ಕಸದ ಕರಕ್ಕೆ ಸರ್ಕಾರ ಅಂಕಿತ ಹಾಕಿದೆ.
ಹೌದು, ಕಸ ನಿರ್ವಹಣೆ ಜತೆಗೆ ಇನ್ಮುಂದೆ ಬಳಕೆದಾರರ ಶುಲ್ಕ ಕಟ್ಟಬೇಕಾಗುತ್ತದೆ. 2019ರ ಆಗಸ್ಟ್ ನಲ್ಲಿ ಅನುಮೋದಿಸಿದ್ದ ನಿರ್ಣಯವನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದ್ದು, ಕಸ ನಿರ್ವಹಣೆ ಉಪನಿಯಮ 2020 ರಾಜ್ಯಪತ್ರಕ್ಕೆ ರಾಜ್ಯದಿಂದ ಅಧಿಸೂಚನೆ ಬಂದಿದೆ.
ಇಲ್ಲಿಯತನಕ ಕಸದ ನಿರ್ವಹಣೆಗೆ ಶೇಕಡಾ 5 ರಷ್ಟು ಮಾತ್ರ ಉಪಕರ ಸಂಗ್ರಹ ಮಾಡಲಾಗುತ್ತಿತ್ತು. ಇನ್ಮುಂದೆ ಉತ್ಪಾದಿಸುವ ಕಸಕ್ಕೆ ತಕ್ಕಂತೆ ಶುಲ್ಕ ವಿಧಿಸಬೇಕು. ಈ ಮೂಲಕ ಹೊಸ ನಿಯಮದ ಪ್ರಕಾರ ಕಸ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲು ಪಾಲಿಕೆ ಮುಂದಾಗುತ್ತಿದೆ.
ಪ್ರತಿ ಮನೆಗಳಿಗೆ 200 ರೂ. ಕರ ವಸೂಲಿಗೆ ಅನುಮತಿ ನೀಡಿದೆ ಸರ್ಕಾರ. ಒಂದು ಸಾವಿರ ಅಡಿ ಮನೆ ಇದ್ದರೆ 30 ರೂ, 1 ರಿಂದ 3 ಸಾವಿರ ಅಡಿ ವರೆಗಿನ ಮನೆ ಇದ್ದರೆ 40 ರೂ, 3 ಸಾವಿರ ಅಡಿ ಮೇಲ್ಪಟ್ಟ ಮನೆಗಳಿದ್ದರೆ 50 ರೂಪಾಯಿ ವಿಧಿಸಬೇಕು. ಹಾಗೂ ವಾಣಿಜ್ಯ ಕಟ್ಟಡದವರು, 1 ಸಾವಿರದ ಅಡಿವರೆಗೆ 50 ರೂ, 1-5 ಸಾವಿರ ಅಡಿ 100 ರೂ, 5 ಸಾವಿರ ಅಡಿ ಮೇಲ್ಪಟ್ಟು 300 ರೂಪಾಯಿ ನೀಡಬೇಕು. ಈ ನಿಮಯ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ.