ಬೆಂಗಳೂರು: ಕೊರೊನಾ ಲಸಿಕೆಗಾಗಿ ಇಡೀ ದೇಶದ ಜನತೆ ಕಾದು ಕುಳಿತಿದ್ದ ಆ ಕ್ಷಣ ಬಂದಿದೆ. ಪ್ರಧಾನಿ ಮೋದಿ ನಾಳೆ ಲಸಿಕೆ ನೀಡಿಕೆ ಅಭಿಯಾನಕ್ಕೆ ಚಾಲನೆ ನೀಡಿಲಿದ್ದಾರೆ. ರಾಜ್ಯದ 243 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಹಾಕಲಾಗುವುದು ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುಧಾಕರ್, ಕೊರೊನಾ ಅಟ್ಟಹಾಸ ತಡೆಗೆ ಬ್ರಹ್ಮಾಸ್ತ್ರ ಬಂದಿದ್ದು, ನಾಳೆಯಿಂದಲೇ ವ್ಯಾಕ್ಸಿನ್ ನಿಡಿಕೆ ಆರಂಭವಾಗಲಿದೆ. ಕೊರೊನಾ ವಾರಿಯರ್ಸ್ ಗಳಾದ ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರು, ಸಫಾಯಿ ಕರ್ಮಚಾರಿಗಳಿಗೆ ನಾಳೆ ಸಾಂಕೇತಿಕವಾಗಿ ಲಸಿಕೆ ನೀಡಲಾಗುತ್ತದೆ ಎಂದರು.
ಬೆಂಗಳೂರಿನ 10 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ರಾಜ್ಯದಲ್ಲಿ 3312 ಕೋಲ್ಡ್ ಬಾಕ್ಸ್ ಇದ್ದು, ಯಾವ ಕೇಂದ್ರ ನಿಗದಿ ಮಾಡಲಾಗಿದೆಯೋ ಅಲ್ಲಿ ಸ್ವಚ್ಚತೆ ಕಾಪಾಡಲಾಗುವುದು. ಕೇಂದ್ರ ಸರ್ಕಾರ 130 ಕೋಟಿ ಜನರಿಗೆ ಲಸಿಕೆ ನೀಡಲು ಕ್ರಮ ಕೈಗೊಂಡಿದೆ. ಮೂರು ಹಂತಗಳಲ್ಲಿ ಲಸಿಕೆ ಹಾಕಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.
ಇನ್ನು ಲಸಿಕೆ ತೆಗೆದುಕೊಂಡ ಬಳಿಕ ಅಡ್ಡ ಪರಿಣಾಮ ಸಹಜ. ಸ್ವಲ್ಪ ಮಟ್ಟಿನ ಜ್ವರ ಬರುತ್ತದೆ. ನಂತರ ತಾನಾಗಿಯೇ ಸರಿ ಹೋಗಲಿದೆ. ಲಸಿಕೆಯಿಂದ ಯಾವುದೇ ರೀತಿಯ ಸಮಸ್ಯೆಗಳಾಗದು. ಈ ಬಗ್ಗೆ ಆತಂಕಕ್ಕೊಳಗಾಗುವುದು ಬೇಡ ಎಂದು ಹೇಳಿದರು.