ಬೆಳಗಾವಿ: ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇಂದು ರಾತ್ರಿಯಿಂದ 10 ದಿನಗಳ ಕಾಲ ಜಾರಿಗೆ ತರುತ್ತಿರುವ ನೈಟ್ ಕರ್ಫ್ಯೂ ಬಗ್ಗೆ ಕಾಂಗ್ರೆಸ್ ಕಿಡಿಕಾರಿದ್ದು, ಸರ್ಕಾರದ ಕ್ರಮ ಅವೈಜ್ಞಾನಿಕ ಹಾಗೂ ಹಾಸ್ಯಾಸ್ಪದ ಎಂದು ಹೇಳಿದೆ.
ಬೈಲಹೊಂಗಲದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೊರೊನಾ ತಡೆಗೆ ಇಂದು ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿ ಮಾಡುತ್ತಿದ್ದಾರೆ. ಕೊರೊನಾ ಸೋಂಕು ರಾತ್ರಿ ಮಾತ್ರ ಹರಡತ್ತೆ, ಹಗಲಿನಲ್ಲಿ ಜನರು ಓಡಾಡಬಹುದು ಎಂದು ಸರ್ಕಾರಕ್ಕೆ ಹೇಳಿದ ವಿಜ್ಞಾನಿ ಯಾರು? ಅವರು ಯಾರೆಂದು ನಮಗೂ ಹೇಳಿದರೆ ನಾವು ಅವರ ಫೋಟೋ ಹಾಕಿ ಇಟ್ಟುಕೊಳ್ತೀವಿ ಎಂದು ವ್ಯಂಗ್ಯವಾಡಿದ್ದಾರೆ.
ಜನರಲ್ಲಿ ಕೊರೊನಾ ಜಾಗೃತಿ ಮೂಡಿಸೋಕೆ ಮತ್ತೆ ಬಂದಿದ್ದಾನೆ ಯಮರಾಜ..!
ರಾಜ್ಯ ಸರ್ಕಾರ ಜನರನ್ನು ಮಾನಸಿಕವಾಗಿ ಕುಗ್ಗಿಸುವ ಯತ್ನ ನಡೆಸುತ್ತಿದೆ. ನೈಟ್ ಕರ್ಫ್ಯೂ ಅವೈಜ್ಞಾನಿಕ. ರಾತ್ರಿ ಹೊತ್ತು ಓಡಾಡುವ ರೈಲು, ವಿಮಾನ ಸಂಚಾರಗಳನ್ನು ಇವರು ನಿಲ್ಲಿಸುತ್ತಾರಾ ಎಂದು ಪ್ರಶ್ನಿಸಿದರು.
ಇದೇ ವೇಳೆ ಸಾರಿಗೆ ಮುಷ್ಕರ ಹತ್ತಿಕ್ಕುತ್ತಿರುವ ಸರ್ಕಾರದ ಕ್ರಮ ಖಂಡಿಸಿದ ಡಿ.ಕೆ.ಶಿ, ಇದು ಪ್ರಜಾಪ್ರಭುತ್ವ ಇಲ್ಲಿ ರೈತ ಮುಖಂಡರಾಗಲಿ, ಕಾರ್ಮಿಕ ಮುಖಂಡರಾಗಲಿ ಯಾರದೇ ಪ್ರತಿಭಟನೆ ಹೋರಾಟ ಹತ್ತಿಕ್ಕಲು ಕಾನೂನು ದುರ್ಬಳಕೆ ಸರಿಯಲ್ಲ. ಸಂಘಟನೆಗಳು ಅವರ ಕಷ್ಟಗಳನ್ನು ಹೇಳಿಕೊಂಡು ಚರ್ಚಿಸುವುದು, ಕಷ್ಟ ಪರಿಹಾರ ಮಾಡಿ ಎಂದು ಹೋರಾಟ ಮಾಡುವುದೂ ತಪ್ಪಾ? ಒಂದು ವೇಳೆ ಇವರನ್ನು ಹೊಗಳಲು ಸಭೆ ಮಾಡಿದರೆ ಅದು ಸರಿ ಆಗ ಯಾವುದೇ ಕಾನೂನು ಅಡ್ಡಿಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.