ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕು ತಗುಲುತ್ತಿರುವುದರಿಂದ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ವೈದ್ಯಕೀಯ ಸಿಬ್ಬಂದಿ, ಸಮುದಾಯ ಸಾರಿಗೆ ವಾಹನ ಚಾಲಕರು, ಪೊಲೀಸರು, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳಂತಹ ಗುಂಪುಗಳಲ್ಲಿ ರಾಂಡಮ್ ಪರೀಕ್ಷೆ ನಡೆಸಬೇಕೆಂಬ ಮಾತುಗಳ ಮಧ್ಯೆ ಶಾಕಿಂಗ್ ಸಂಗತಿಯೊಂದು ಬಹಿರಂಗವಾಗಿದೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಪರೀಕ್ಷೆ ಇಳಿಮುಖವಾಗಿದೆ ಎನ್ನಲಾಗಿದ್ದು, ಈ ಹಿಂದೆ ದಿನವೊಂದಕ್ಕೆ 15 ಸಾವಿರದವರೆಗೆ ಪರೀಕ್ಷೆ ನಡೆದಿದ್ದು, ಈಗ 10 ಸಾವಿರದ ಗಡಿಗೆ ಬಂದು ನಿಂತಿದೆ ಎಂದು ಹೇಳಲಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಪರೀಕ್ಷೆ ಏರುಗತಿಯಲ್ಲಿ ನಡೆಯಬೇಕಾಗಿತ್ತಾದರೂ ಅದು ಇಳಿಮುಖವಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಕೆಲವೇ ದಿನಗಳಲ್ಲಿ ಪ್ರತಿದಿನ 25 ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಹೇಳಿದ್ದರಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಆರಂಭದಲ್ಲಿ ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ಪರೀಕ್ಷೆ ಆರಂಭವಾಗಿದ್ದು, ನಂತರದಲ್ಲಿ ಜಿಲ್ಲೆಗೊಂದರಂತೆ ಪ್ರಯೋಗಾಲಯ ಆರಂಭಿಸಿದ್ದರ ಜೊತೆಗೆ ಹೆಚ್ಚಿನ ಸಾಮರ್ಥ್ಯದ ಪರೀಕ್ಷಾ ಯಂತ್ರಗಳನ್ನು ಅಳವಡಿಸಲಾಗಿತ್ತು. ಹೀಗಾಗಿ ಕೊರೊನಾ ಪರೀಕ್ಷೆ ಹೆಚ್ಚಳವಾಗಿತ್ತು. ಆದರೆ ಈಗ ಕೆಲವು ದಿನಗಳಿಂದ ಇದು ಇಳಿಮುಖವಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ರಾಂಡಮ್ ಪರೀಕ್ಷೆ ನಡೆಸುವುದು ಬಹುಮುಖ್ಯವಾಗಿದೆ.