ಬೆಂಗಳೂರು: ಕೊರೊನಾ ಮಾಹಾಮಾರಿ ಶರವೇಗದಲ್ಲಿ ವ್ಯಾಪಿಸುತ್ತಿದ್ದು, ಮನೆ ಮನೆಯಲ್ಲಿಯೂ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೌದು. ಪ್ರತಿಯೊಂದು ಮನೆಯಲ್ಲಿ ಪ್ರತಿಯೊಬ್ಬರಲ್ಲಿ ಕೂಡ ಕೋವಿಡ್ ಪಾಸಿಟಿವ್ ಕಂಡುಬರುತ್ತಿರುವ ದುಃಸ್ಥಿತಿ ಬಂದೊದಗಿದೆ.
ದೇಶದಲ್ಲಿ, ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಕ್ಷಣ ಕ್ಷಣಕ್ಕೂ ಕೂಡ ಭಯವನ್ನುಂಟುಮಾಡುತ್ತಿದೆ. ಹಾಗಾದರೆ ಕೊರೊನಾ 2ನೇ ಅಲೆಯಲ್ಲಿ ಸಾಮಾನ್ಯವಾಗಿ ಸೋಂಕಿತರಲ್ಲಿ ಕಂಡುಬರುತ್ತಿರುವ ಲಕ್ಷಣಗಳೇನು? ಸೋಂಕಿತರು ಮಾಡಬೇಕಿರುವುದು ಏನು? ಯಾರೆಲ್ಲ ರೆಮ್ ಡಿಸಿವಿರ್ ಔಷಧವನ್ನು ಪಡೆಯಬೇಕು, ಕೋವಿಡ್ ಔಷಧದಿಂದ ಆಗುತ್ತಿರುವ ದುಷ್ಪರಿಣಾಮವೇನು ಎಂಬುದನ್ನು ಡಾ.ರಾಜು ಕೃಷ್ಣಮೂರ್ತಿ ತಮ್ಮ ಹೊಸ ವಿಡಿಯೋದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ, ಧೈರ್ಯ ತುಂಬುತ್ತಿರುವ ಡಾ.ರಾಜು ಕೊರೊನಾ ರೂಪಾಂತರ ವೈರಸ್ ಲಕ್ಷಣ ಕುರಿತಾಗಿ ಹಾಗೂ ಮನೆಯಲ್ಲೇ ಸೋಂಕಿತರು ಪಡೆದುಕೊಳ್ಳಬಹುದಾದ ಔಷಧ ಬಗ್ಗೆ ತಿಳಿಸಿದ್ದಾರೆ. ಜ್ವರ, ನೆಗಡಿ, ಕೆಮ್ಮು, ಗಂಟಲ ನೋವು ವಾಂತಿ, ಬೇಧಿ, ಹೊಟ್ಟೆ ನೋವು, ಎದೆ ನೋವಿನಂತಹ ಲಕ್ಷಣಗಳು ಕೋವಿಡ್ ಪ್ರಮುಖ ಲಕ್ಷಣಗಳಾಗಿವೆ. ಕೋವಿಡ್ ಸೋಂಕು ಕಂಡು ಬಂದ ಎಲ್ಲರಿಗೂ ಆಕ್ಸಿಜನ್ ಹಾಗೂ ಔಷಧದ ಅಗತ್ಯವಿಲ್ಲ. ಶೇ.2ರಷ್ಟು ಕೋವಿಡ್ ರೋಗಿಗಳಿಗೆ ಮಾತ್ರ ಆಕ್ಸಿಜನ್ ಅಗತ್ಯವಿರುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿ ಸಾಧ್ಯತೆ; ಯಾವುದೇ ಕ್ರಮಕ್ಕೆ ರಾಜ್ಯಪಾಲರ ಸಲಹೆ
ಇನ್ನು ರೆಮ್ ಡಿಸಿವೆರ್ ಇಂಜಕ್ಷನ್ ಪಡೆದ ಹಲವರಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿವೆ. ಅದರಲ್ಲೂ ಲಿವರ್, ಕಿಡ್ನಿ ಸಮಸ್ಯೆಯಂತಹ ತೊಂದರೆ ಎದುರಾಗಿದೆ ಎಂದು ವರದಿಯಾಗಿದೆ ಇದು ಮುಂದಿನ ದಿನಗಳಲ್ಲಿ ಸೋಂಕಿತರಲ್ಲಿ ಇನ್ನಷ್ಟು ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದೆ. ಹಾಗಾಗಿ ರೆಮ್ ಡಿಸಿವೆರ್ ಪಡೆದುಕೊಳ್ಳುವಾಗ ಎಚ್ಚರವಿರುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಬಹುಮುಖ್ಯ ಸಲಹೆಯೊಂದನ್ನು ನೀಡಿರುವ ಡಾ.ರಾಜು, ಒಂದೊಮ್ಮೆ ನಿಮ್ಮಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದಿದ್ದರೆ ಅಥವಾ ಕೊರೊನಾ ಪಾಸಿಟಿವ್ ಬಂದಿದ್ದರೆ ತಮ್ಮ ವಾಟ್ಸಪ್ ಸಂಖ್ಯೆಗೆ ಮೆಸೇಜ್ ಮಾಡಿ ಮನೆಯಲ್ಲೇ ಇದ್ದು ಸೋಂಕಿನಿಂದ ರಕ್ಷಿಸಿಕೊಳ್ಳಬಹುದಾದ ಹಾಗೂ ಪಾರಾಗಬಹುದಾದ ಸಲಹೆ, ಔಷಧಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.