ರಾಜ್ಯದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಮಹಾಮಾರಿ ಅಬ್ಬರಿಸುತ್ತಿದೆ. ಬೆಂಗಳೂರಿನ ಬಹುತೇಕ ವಾರ್ಡ್ ಗಳಿಗೆ ಕೊರೊನಾ ವ್ಯಾಪಿಸಿದ್ದು, ಹೀಗಾಗಿ ಇದರ ನಿಯಂತ್ರಣಕ್ಕೆ ಲಾಕ್ ಡೌನ್ ಹೊರತುಪಡಿಸಿದ ಅನ್ಯ ಮಾರ್ಗಗಳತ್ತ ಸರ್ಕಾರ ಚಿತ್ತ ಹರಿಸಿದೆ.
ಈ ಹಿಂದೆ ಲಾಕ್ ಡೌನ್ ಮಾಡಿದ ಕಾರಣ ಯಾವುದೇ ಚಟುವಟಿಕೆಗಳು ನಡೆಯದ ಪರಿಣಾಮ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸಿದೆ. ಲಾಕ್ ಡೌನ್ ಸಡಿಲಿಕೆ ಮಾಡಿದ ಬಳಿಕ ಆರ್ಥಿಕ ಚಟುವಟಿಕೆಗಳು ನಿಧಾನವಾಗಿ ಗರಿಗೆದರತೊಡಗಿದ್ದು, ಇದರ ಮಧ್ಯೆ ಮತ್ತೆ ಲಾಕ್ ಡೌನ್ ಜಾರಿಗೊಳಿಸಿದರೆ ಮುಂದಿನ ದಿನಗಳು ಮತ್ತಷ್ಟು ಸಂಕಷ್ಟಕರವಾಗಿರಲಿವೆ ಎಂಬ ಕಾರಣಕ್ಕೆ ಲಾಕ್ ಡೌನ್ ಜಾರಿ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಹೀಗಾಗಿ ಎಲ್ಲ ಸಾಧಕ-ಬಾಧಕಗಳನ್ನು ಪರಿಶೀಲಿಸುವ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ನಾಳೆ ಬೆಳಿಗ್ಗೆ 11.30 ಕ್ಕೆ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಬೆಂಗಳೂರು ನಗರದ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಹಾಗೂ ಕಾರ್ಪೊರೇಟರ್ ಗಳ ಸಭೆಯನ್ನು ಕರೆದಿದ್ದು, ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಾಗುತ್ತದೆ.