ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಮಧ್ಯೆ ಡಿ.ಕೆ. ಶಿವಕುಮಾರ್ ನೇತೃತ್ವದ ಪ್ರದೇಶ ಕಾಂಗ್ರೆಸ್ ಸಮಿತಿ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದ ಪ್ರತಿಯೊಂದು ಹಳ್ಳಿಗಳಲ್ಲಿ ಕೊರೊನಾ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಈಗಾಗಲೇ ವೈದ್ಯರ ತಂಡವನ್ನು ಸಿದ್ದ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೆಪಿಸಿಸಿ ವೈದ್ಯ ವಿಭಾಗ ಇದರ ಉಸ್ತುವಾರಿ ವಹಿಸಲಿದ್ದು, ಪ್ರತಿಯೊಂದು ವಾರ್ಡ್ ಮಟ್ಟದಲ್ಲಿ ತಂಡವನ್ನು ರಚಿಸಲಾಗುತ್ತದೆ. ಇದರ ಜೊತೆಗೆ ತಾಲೂಕು ಮಟ್ಟದಲ್ಲಿ ವೈದ್ಯರೊಬ್ಬರು ಕಾರ್ಯ ನಿರ್ವಹಿಸಲಿದ್ದು, ಪ್ರತಿಯೊಂದು ಹಳ್ಳಿಯಲ್ಲಿ ಕನಿಷ್ಠ ಹತ್ತು ಮಂದಿಯ ತಂಡ ಮನೆ ಮನೆಗೆ ತೆರಳಿ ಪರೀಕ್ಷೆ ಕೈಗೊಳ್ಳಲಿದೆ.
ಈ ತಂಡ ಸಾರ್ವಜನಿಕರ ಆಕ್ಸಿಜನ್ ಮಟ್ಟ ಸೇರಿದಂತೆ ಹಲವು ವಿವಿಧ ಪರೀಕ್ಷೆಗಳನ್ನು ನಡೆಸಲಿದ್ದು, ಎಲ್ಲ ಮಾಹಿತಿಯನ್ನು ವೈದ್ಯರೊಂದಿಗೆ ಹಂಚಿಕೊಳ್ಳಲಿದೆ. ಇದರ ಅನುಸಾರ ಚಿಕಿತ್ಸೆ ನೀಡಲಿದ್ದು, ಅಗತ್ಯವಿದ್ದವರಿಗೆ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ತಾವು ಪರೀಕ್ಷೆ ನಡೆಸಿದ ವಿವರಗಳನ್ನು ಸರ್ಕಾರಿ ವೈದ್ಯರೊಂದಿಗೆ ಹಂಚಿಕೊಳ್ಳಲಿದೆ.ಮುಂದಿನ ದಿನಗಳಲ್ಲಿ ಇದರಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಬಹುದೆಂಬ ವಿಶ್ವಾಸವನ್ನು ಕೆಪಿಸಿಸಿ ಹೊಂದಿದೆ.