ಒಂದು ಕಡೆ ಕೊರೊನಾ ಬಿಟ್ಟೂ ಬಿಡದೆ ಕಾಡುತ್ತಿದೆ. ಮತ್ತೊಂದೆಡೆ ದಿನದಿಂದ ದಿನಕ್ಕೆ ದಿನ ಬಳಕೆ ವಸ್ತುಗಳು, ತಿನ್ನುವ ಪದಾರ್ಥಗಳ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ. ಕೈಯಲ್ಲಿದ್ದ ಕೆಲಸ ಕಳೆದುಕೊಂಡಿರುವ ಸಮಯದಲ್ಲೇ ಈ ರೀತಿ ಬೆಲೆ ಏರಿಕೆ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ.
ಹೌದು, ಕೊರೊನಾದಿಂದಾಗಿ ಹಬ್ಬ ಹರಿದಿನಗಳನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಮನೆ ಮಂದಿಯಾದರೂ ಖುಷಿಯಿಂದ ಹಬ್ಬ ಆಚರಿಸೋಣ ಎಂದುಕೊಂಡರೆ ಬೆಲೆ ಏರಿಕೆಯ ಹೊಡೆತ ಗ್ರಾಹಕರನ್ನು ನಿದ್ದೆಗೆಡಿಸಿದೆ.
ನಿತ್ಯ ಉಪಯೋಗಿಸುವ ತರಕಾರಿ, ಬೇಳೆ ಕಾಳು ಸೇರಿದಂತೆ ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಿದ್ದಾವೆ. ಈರುಳ್ಳಿ, ಆಲೂಗಡ್ಡೆ, ಹಾಗಲಕಾಯಿ, ಬದನೆಕಾಯಿ, ಬೀನ್ಸ್, ಬಟಾಣಿ, ಕ್ಯಾರೆಟ್ ಬೆಲೆಗಳು ಎರಡಂಕಿ ಮೂರಂಕಿ ದಾಟಿವೆ.
ಕಳೆದ 2 ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಅತಿವೃಷ್ಟಿ ಉಂಟಾಗಿದ್ದು, ಪ್ರವಾಹವಾಗಿತ್ತು. ಹೀಗಾಗಿ ಬೆಳೆದ ಫಸಲು ಕೈಗೂ ಸಿಕ್ಕಿಲ್ಲ. ಇದರಿಂದಲೇ ತರಕಾರಿ ಕಾಳುಗಳ ಬೆಲೆ ಗಗನಕ್ಕೇರಿದೆ. ಈ ಬಿಸಿ ಇದೀಗ ದೀಪಾವಳಿ ಹಬ್ಬಕ್ಕೂ ತಟ್ಟುತ್ತಿದೆ. ಪ್ರವಾಹದಲ್ಲಿ ಬೆಳೆ ಕೊಚ್ಚಿ ಹೋಗಿದ್ದರಿಂದ ರಾಜ್ಯದಲ್ಲಿ ತರಕಾರಿ, ಕಾಳು ಸೇರಿದಂತೆ ದಿನನಿತ್ಯದ ಪದಾರ್ಥಗಳ ಕೊರತೆ ಉಂಟಾಗಿದ್ದು ಬೆಲೆ ಏರಿಕೆ ಆಗುತ್ತಿದೆ.