ಬೆಂಗಳೂರು: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸೋಂಕು ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ನಾಯಕರು ಕೊರೊನಾ ಸೋಂಕು ತಡೆಗಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಲಿ, ಇಲ್ಲವೇ ಅಧಿಕಾರ ಬಿಟ್ಟು ತೊಲಗಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಸರ್ಕಾರದ ಅದಕ್ಷತೆ ಹಾಗೂ ದುರಾಡಳಿತಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಲಸಿಕೆ, ಬೆಡ್, ಆಕ್ಸಿಜನ್, ಚಿಕಿತ್ಸೆಗೆ ವ್ಯವಸ್ಥೆಯನ್ನೂ ಸರ್ಕಾರಕ್ಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಲಸಿಕೆ ತಯಾರಿಕೆ ಸಂಬಂಧ 162 ಯುನಿಟ್ ಗಳಿಗೆ ಕೇಂದ್ರ ಸರ್ಕಾರ ಟೆಂಡರ್ ಕರೆದಿತ್ತು, ಈ ಪೈಕಿ 30 ಯುನಿಟ್ ಗಳಷ್ಟೇ ಕಾರ್ಯಾರಂಭ ಮಾಡಿವೆ. ದೇಶದಲ್ಲಿ ಲಸಿಕೆಯ ಅಭಾವ ಉಂಟಾಗಲು ಇದೇ ಮುಖ್ಯ ಕಾರಣ ಎಂದಿದ್ದಾರೆ.
ಈ ವರೆಗೆ 45 ವರ್ಷ ಮೇಲ್ಪಟ್ಟ ಶೇ.25 ಜನರಿಗಷ್ಟೇ ಕೊರೊನಾ ಲಸಿಕೆ ನೀಡಲಾಗಿದೆ. ನಮ್ಮಲ್ಲೇ ಲಸಿಕೆಯ ಅಗತ್ಯತೆ ಹೆಚ್ಚಿರುವಾಗ ಪ್ರಧಾನಿ ಮೋದಿ ಅವರು ವಿದೇಶಗಳಿಗೆ 6 ಕೋಟಿ ಲಸಿಕೆ ನೀಡಿ ಭಾರತೀಯರು ಲಸಿಕೆಗಾಗಿ ಪರದಾಡುವಂತೆ ಮಾಡಿದ್ದಾರೆ. ಸೋಂಕು ಹರಡಲು ಇದೂ ಒಂದು ಕಾರಣ. ಕೇಂದ್ರದ ನಾಯಕರ ತಾತ್ಸಾರ ಧೋರಣೆಗೆ ಜನ ಜೀವ ತೆರುವಂತಾಗಿದೆ ಎಂದು ಗುಡುಗಿದ್ದಾರೆ.