ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯಾದ್ಯಂತ 14 ದಿನಗಳವರೆಗೆ ಕಠಿಣ ನಿಯಮ ಜಾರಿಯಾಗಿದೆ. ಇದರ ಬೆನ್ನಲ್ಲೇ ಜನರು ಗಂಟು ಮೂಟೆ ಕಟ್ಟಿಕೊಂಡು ಬೆಂಗಳೂರು ತೊರೆಯುತಿದ್ದು, ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.
ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್ ಸಕ್ರಿಯ ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗುತ್ತಿದ್ದು, ದಿನದಿಂದ ದಿನಕ್ಕೆ ದಾಖಲೆ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕೆ ನಾಳೆ ರಾತ್ರಿಯಿಂದ ಟಫ್ ರೂಲ್ಸ್ ಜಾರಿಗೆ ಬರುತ್ತಿದ್ದು, ಮುಂದಿನ 14 ದಿನಗಳ ಕಾಲ ಬಸ್ ಸೇರಿದಂತೆ ಸಾರಿಗೆ ಸಂಚಾರ, ಜನರ ಓಡಾಟಕ್ಕೂ ನಿಷೇಧ ಹೇರಲಾಗಿದೆ. ಇದರಿಂದ ಕಂಗಾಲಾದ ಜನರು ಇಂದೇ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.
ನಾಳೆಯಿಂದ 14 ದಿನಗಳ ಕಾಲ ಸಾರಿಗೆ ಸಂಚಾರಕ್ಕೆ ಸಂಪೂರ್ಣ ನಿಷೇಧ
ಕೂಲಿ ಕಾರ್ಮಿಕರು, ಬಡವರು, ವಿದ್ಯಾರ್ಥಿಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಹಲವರು ಗಂಟು ಮೂಟೆ ಕಟ್ಟಿಕೊಂಡು, ಕುಟುಂಬ ಸಮೇತ ಊರು ಸೇರುತ್ತಿದ್ದಾರೆ. ಲಾಕ್ ಡೌನ್ ಮಾದರಿಯಲ್ಲಿ ಬಿಗಿ ಕ್ರಮ ಜಾರಿಯಾಗುತ್ತಿರುವುದರಿಂದ ಬೆಂಗಳೂರಿನಲ್ಲಿ ಕೆಲಸವಿಲ್ಲದೇ ಬಾಡಿಗೆ ಕಟ್ಟದೇ, ಕುಟುಂಬ ನಿರ್ವಹಣೆ ಕಷ್ಟಸಾಧ್ಯ. ನಾಳೆಯಿಂದ ಸಾರಿಗೆ ಸಂಚಾರವೂ ಇರುವುದಿಲ್ಲ ಎಂದ ಮೇಲೆ ಪ್ರಯಾಣಕ್ಕೂ ಕಷ್ಟವಾಗುತ್ತದೆ. ಹಾಗಾಗಿ ಇಂದೇ ಬೆಂಗಳೂರು ಬಿಡುತ್ತಿದ್ದೇವೆ. ಊರಿಗೆ ಹೋದರೆ ಹೊತ್ತಿನ ಊಟಕ್ಕಾದರೂ ಸಮಸ್ಯೆಯಾಗುವುದಿಲ್ಲ ಎಂಬುದು ಹಲವರ ಅಭಿಪ್ರಾಯ.