
ಋತು ಬದಲಾಗ್ತಿದೆ. ಹಾಗಾಗಿ ಅನೇಕರಲ್ಲಿ ನೆಗಡಿ, ಜ್ವರ, ಕೆಮ್ಮು ಕಾಣಿಸಿಕೊಳ್ತಿದೆ. ಸದ್ಯ ಕೊರೊನಾ ಅಬ್ಬರವಿರುವ ಕಾರಣ ಯಾವುದು ಸಾಮಾನ್ಯ ಜ್ವರ ಹಾಗೂ ಯಾವುದು ಕೊರೊನಾ ವೈರಸ್ ಎಂಬುದು ಅರ್ಥವಾಗದೆ ಜನರು ಭಯದಲ್ಲಿದ್ದಾರೆ. ಸಾಮಾನ್ಯ ಜ್ವರ ಹಾಗೂ ಕೋವಿಡ್ 19 ಜ್ವರದ ಮಧ್ಯೆ ವ್ಯತ್ಯಾಸ ಕಂಡು ಹಿಡಿಯುವುದು ಬಹಳ ಕಷ್ಟ. ಎರಡೂ ರೋಗದ ಲಕ್ಷಣಗಳು ಬಹುತೇಕ ಒಂದೇ ರೀತಿಯಿದೆ. ಪರೀಕ್ಷೆ ನಂತ್ರ ಮಾತ್ರ ಯಾವ ಜ್ವರ ಎಂಬುದನ್ನು ಪತ್ತೆ ಹಚ್ಚಬಹುದು.
ಕೊರೊನಾ ವೈರಸ್ ಮತ್ತು ಜ್ವರ ಎರಡರಲ್ಲೂ ದೇಹದಲ್ಲಿ ನೋವು, ಗಂಟಲು ನೋವು, ಜ್ವರ, ಕೆಮ್ಮು, ಉಸಿರಾಟದ ತೊಂದರೆ, ದಣಿವು ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ. ವಿಜ್ಞಾನಿಗಳು ಕೇವಲ ಎರಡು ರೋಗಲಕ್ಷಣಗಳನ್ನು ನೋಡುವ ಮೂಲಕ, ಕೋವಿಡ್ -19 ಮತ್ತು ಜ್ವರ ನಡುವಿನ ವ್ಯತ್ಯಾಸವನ್ನು ಗುರುತಿಸಬಹುದು ಎಂದಿದ್ದಾರೆ.
ಸಾಮಾನ್ಯ ಜ್ವರದಲ್ಲಿ ವ್ಯಕ್ತಿ ಒಂದು ವಾರದೊಳಗೆ ಚೇತರಿಸಿಕೊಳ್ಳುತ್ತಾನೆ. ಆದ್ರೆ ಕೊರೊನಾ ಜ್ವರದಲ್ಲಿ ವ್ಯಕ್ತಿಗೆ ಚೇತರಿಸಿಕೊಳ್ಳಲು ಎರಡು, ಮೂರು ವಾರ ಬೇಕಾಗುತ್ತದೆ. ಹಾಗೆ ಕೋವಿಡ್ 19 ಸೋಂಕಿಗೆ ಒಳಗಾದ ವ್ಯಕ್ತಿಗೆ ವಾಸನೆ ಹಾಗೂ ರುಚಿ ಗೊತ್ತಾಗುವುದಿಲ್ಲ. ಸಾಮಾನ್ಯ ಜ್ವರದಲ್ಲಿ ಈ ಲಕ್ಷಣ ಕಂಡು ಬರುವುದಿಲ್ಲ. ಆದ್ರೆ ಕೊರೊನಾ ಸೋಂಕಿತ ಎಲ್ಲರಿಗೂ ಈ ರೋಗ ಲಕ್ಷಣ ಕಂಡು ಬರುವುದಿಲ್ಲ ಎಂಬುದು ನೆನಪಿರಲಿ.
ಕೊರೊನಾ ಹಾಗೂ ಜ್ವರ ಎರಡೂ ಸೋಂಕು ಮನುಷ್ಯನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸೋಂಕಿನ ಸಂಯೋಜನೆ ಸಾವಿಗೆ ಕಾರಣವಾಗಬಹುದು. ಶೇಕಡಾ 43ರಷ್ಟು ಜನರು ಇದ್ರಿಂದ ಸಾವನ್ನಪ್ಪಿದ್ದಾರೆಂದ ಸಂಶೋಧಕರು ಹೇಳಿದ್ದಾರೆ.